

ಕುಶಾಲನಗರ:
ಗೌರಿ ಹಬ್ಬದ ಅಂಗವಾಗಿ ಕುಶಾಲನಗರ ವ್ಯಾಪ್ತಿಯ ಬಹುತೇಕ ಕಡೆಗಳಲ್ಲಿ ಮಂಗಳವಾರ ಮಹಿಳೆಯರು ಸಡಗರ - ಸಂಭ್ರಮಗಳಿAದ ಶ್ರದ್ಧೆ ಮತ್ತು ಭಕ್ತಿ ತುಂಬಿ ಸ್ವರ್ಣಗೌರಿ ಪ್ರತಿಷ್ಠಾಪಿಸಿ ಪೂಜಿಸಿದರು. ಮುಂಜಾನೆ ಬೇಗ ಎದ್ದು ಮಡಿಯುಟ್ಟ ಮಹಿಳೆಯರು ಮನೆಯಂಗಳದಲ್ಲಿ, ಮನೆ ಮುಂದೆ ರಂಗೋಲಿ ಹಚ್ಚಿ ತೋರಣಗಳನ್ನು ಕಟ್ಟಿ, ನೀರಿನ ಕೊಳವೆ, ಬಾವಿಗಳಲ್ಲಿ ಪೂಜಿಸಿ ಸ್ವರ್ಣ ಗೌರಿ ಪ್ರತಿಷ್ಠಾಪಿಸಿ ಪೂಜಿಸಿದರು.
ಕುಶಾಲನಗರದ ಚೌಡೇಶ್ವರಿ ದೇವಾಲಯದಲ್ಲಿ ದೇವಾಲಯ ಸಮಿತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಗೌರಿ ಪ್ರತಿಷ್ಠಾಪಿಸಲಾಯಿತು.
ಬೆಳಗ್ಗೆ ಕಾವೇರಿ ನದಿಗೆ ತೆರಳಿದ ಮಹಿಳೆಯರು ಸಾಮೂಹಿಕವಾಗಿ ಗಂಗಾ ಪೂಜೆ ನೆರವೇರಿಸಿದರು. ಬಳಿಕ ಮೆರವಣಿಗೆ ಮೂಲಕ ದೇವಾಲಯಕ್ಕೆ ಆಗಮಿಸಿ ಸ್ವರ್ಣಗೌರಿಯನ್ನು ಪ್ರತಿಷ್ಠಾಪಿಸಿ ಪೂಜಿಸಿ ಪರಸ್ಪರ ಅರಿಶಿನ ಕುಂಕುಮ, ಬಳೆಗಳನ್ನು ಕೊಟ್ಟು ತೊಟ್ಟು ಸಂಪ್ರದಾಯ ಮೆರೆದರು. ದೇವಾಲಯದ ಅರ್ಚಕ ಪ್ರಸನ್ನ ಭಟ್ ಪೂಜಾ ವಿಧಿ ನಡೆಸಿದರು.
ದೇವಾಲಯ ಸಮಿತಿ ಅಧ್ಯಕ್ಷ ಡಿ.ವಿ. ರಾಜೇಶ್, ಕಾರ್ಯದರ್ಶಿ ಕೃಷ್ಣಕುಮಾರ್, ಜಯಂತ್ ಹಾಗೂ ಮಹಿಳಾ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು.