

ತುಮಕೂರು: ಖಾತೆ ಬದಲಾವಣೆ, ಪೌತಿ ಬದಲಾವಣೆ, ಸಂಧ್ಯಾಸುರಕ್ಷಾ ಯೋಜನೆ, ಪಿಂಚಣಿ, ಮನೆ, ನಿವೇಶನ ಸೇರಿ ವಿವಿಧ ಸಮಸ್ಯೆಗಳನ್ನು ಹೊತ್ತು ಬಂದ ಸಾರ್ವಜನಿಕರಿಗೆ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಸಾತ್ವನ ಹೇಳಿದರು.
ನಗರದ ತಾಲೂಕು ಕಚೇರಿ ಆವರಣದಲ್ಲಿ ಸೋಮವಾರ ಶಾಸಕರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಮೊದಲ ಜನತಾ ದರ್ಶನದಲ್ಲಿ ವಿವಿಧ ಸಮಸ್ಯೆಗಳ 1,246 ಅರ್ಜಿಗಳು ಸಲ್ಲಿಕೆಯಾಗಿದ್ದು, 500ಕ್ಕೂ ಹೆಚ್ಚು ಅರ್ಜಿಗಳನ್ನು ಸ್ಥಳದಲ್ಲಿ ಇತ್ಯರ್ಥಪಡಿಸಲಾಯಿತು.
ಕಚೇರಿಗಳಲ್ಲಿ ಸಣ್ಣಪುಟ್ಟ ಕೆಲಸಗಳಿಗೂ ಸಾರ್ವಜನಿಕರನ್ನು ಅಲೆದಾಡಿಸುತ್ತಿರುವ, ಹಣಕ್ಕಾಗಿ ಬೇಡಿಕೆ ಇಡುತ್ತಿರುವ ದೂರುಗಳಿದ್ದು ಖುದ್ದು ನಾನೇ ಅರ್ಜಿಗಳನ್ನು ವಿಲೇವಾರಿ ಮಾಡಿಸಿಕೊಡಲು ಜನತಾದರ್ಶನ ಹಮ್ಮಿಕೊಂಡಿದ್ದೇನೆ, ಅರ್ಜಿ ಪೂರ್ಣಗೊಳ್ಳುವವರೆಗೂ ಶಾಸಕರ ಕಚೇರಿ ಸಿಬ್ಬಂದಿ ನಿಗಾ ವಹಿಸಲಿದ್ದಾರೆ, ಅರ್ಜಿಯ ಸ್ಥಿತಿಗತಿಯ ಬಗ್ಗೆ ಅರ್ಜಿದಾರರಿಗೆ ಮಾಹಿತಿ ನೀಡಲಾಗುವುದು ಎಂದು ಡಿ.ಸಿ.ಗೌರಿಶಂಕರ್ ತಿಳಿಸಿದರು.
ಪ್ರತಿ ಸೋಮವಾರ ಹೋಬಳಿಮಟ್ಟದಲ್ಲಿ ಹಾಗೂ ಪ್ರತಿ ತಿಂಗಳಿಗೊಮ್ಮೆ ತಾಲೂಕು ಕಚೇರಿಯಲ್ಲಿ ಜನತಾದರ್ಶನ ಏರ್ಪಡಿಸಲಾಗುವುದು, ಅಭಿಯಾನ ನಿರಂತರವಾಗಿ ನಡೆದರೆ ವರ್ಷದೊಳಗೆ ಕಂದಾಯ ಇಲಾಖೆ ಸಮಸ್ಯೆಗಳಿಂದ ತಾಲೂಕು ಮುಕ್ತವಾಗುವ ವಿಶ್ವಾಸವನ್ನು ಶಾಸಕರು ವ್ಯಕ್ತಪಡಿಸಿದರು.
ಖಾತೆ, ಪಹಣಿ ಮಾಡಿಸಿಕೊಡಲು ಗ್ರಾಮ ಲೆಕ್ಕಿಗ ಪ್ರವೀಣ್ ಮೂರು ವರ್ಷದ ಹಿಂದೆ 50 ಸಾವಿರ ರೂ. ಹಣ ಪಡೆದುಕೊಂಡಿದ್ದು, ಕೆಲಸ ಮಾಡಿಕೊಡುತ್ತಿಲ್ಲ, ಹಣವನ್ನೂ ನೀಡುತ್ತಿಲ್ಲ ಎಂದು ಹೊನ್ನುಡಿಕೆ ಕಲ್ಲುಪಾಳ್ಯ ಶೆಟ್ಟಾಳಯ್ಯ ಎಂಬುವರು ಶಾಸಕರಿಗೆ ದೂರು ನೀಡಿದರು.
ಭೂಮಿ ಮಂಜೂರು ಮಾಡುವಂತೆ ಹೆತ್ತೇನಹಳ್ಳಿ ಗ್ರಾಮದ ಮಾಜಿ ಸೈನಿಕ ನಟರಾಜ್ ಸಲ್ಲಿಸಿದ ಮನವಿಯನ್ನು ಪರಿಗಣಿಸಿದ ಶಾಸಕರು, 15 ದಿನದಲ್ಲಿ ಕಾನೂನು ಪ್ರಕಾರ ನೀಡಬೇಕಾಗಿರುವ ಭೂಮಿಯನ್ನು ಮಂಜೂರು ಮಾಡುವಂತೆ ತಹಸೀಲ್ದಾರ್ ಹಾಗೂ ಸಂಬಂಧಪಟ್ಟ ಕಂದಾಯಾಧಿಕಾರಿಗೆ ನಿರ್ದೇಶನ ನೀಡಿದರು.
ತಹಸೀಲ್ದಾರ್ ಮೋಹನ್‌ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಮುಖಂಡರಾದ ರಾಮಚಂದ್ರಪ್ಪ, ಹಾಲನೂರು ಅನಂತ್‌ಕುಮಾರ್ ಮತ್ತಿತರರು ಇದ್ದರು.
ಹಣ ಬೇಕಿದ್ದರೆ ನಾನೇ ಕೊಡ್ತೇನೆ!: 1974ರಿಂದ ಮನೆಕಟ್ಟಿಕೊಂಡು ವಾಸ ಮಾಡುತ್ತಿದ್ದೇವೆ, ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರೂ ಗ್ರಾಮಲೆಕ್ಕಿಗ ಶಿವಕುಮಾರ್ ಇಲ್ಲಸಲ್ಲದ ನೆಪ ಹೇಳಿಕೊಂಡು, ಒಂದು ವರ್ಷದಿಂದ ಕಚೇರಿಗೆ ಅಲೆದಾಡಿಸುತ್ತಿದ್ದಾರೆ. ತಹಸೀಲ್ದಾರ್‌ಗೆ ವರದಿ ಸಲ್ಲಿಸುತ್ತಿಲ್ಲ ಎಂದು ಹೊನ್ನಸಂದ್ರ ಗ್ರಾಮಸ್ಥರು ದೂರಿತ್ತರು. ಗ್ರಾಮ ಲೆಕ್ಕಿಗ ಶಿವಕುಮಾರ್ ಅವರನ್ನು ಸ್ಥಳಕ್ಕೆ ಕರೆಸಿದ ಗೌರಿಶಂಕರ್, ಅಕ್ರಮ-ಸಕ್ರಮ ಯೋಜನೆಯಡಿ ಹೊನ್ನಸಂದ್ರ ಗ್ರಾಮಸ್ಥರಿಗೆ 15 ದಿನದಲ್ಲಿ ಖಾತೆ ಮಾಡಿಕೊಡಬೇಕು, ಹಣ ಬೇಕಿದ್ದರೆ ನಾನೇ ಕೊಡುತ್ತೇನೆ ಎಂದು ತಾಕೀತು ಮಾಡಿದರು, ಜತೆಗೆ ಸಮಸ್ಯೆಯನ್ನು ವೈಯಕ್ತಿಕವಾಗಿ ತೆಗೆದುಕೊಂಡು ಬಗೆಹರಿಸುವಂತೆ ತಹಸೀಲ್ದಾರ್ ಮೋಹನ್ ಕುಮಾರ್‌ಗೆ ಸೂಚಿಸಿದರು.
ವೃದ್ಧೆಯನ್ನು ಸಂತೈಸಿದ ಗೌರಿಶಂಕರ್: ಕೌತಮಾರನಹಳ್ಳಿಯ ವೃದ್ಧೆ ಜಯಮ್ಮ, ಮನೆ ಮಂಜೂರು ಮಾಡುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು, ಮಗನಿಗೆ ಪೋಲಿಯೋ ಆಗಿದೆ, ಮಳೆಯಿಂದಾಗಿ ಮನೆ ಬೀಳುವ ಹಂತದಲ್ಲಿದ್ದು, ಅಜ್ಜ-ಮಗನೊಂದಿಗೆ ಮನೆ ಹೊರಗೆ ಬದುಕುತ್ತಿದ್ದೇನೆ, ಮನೆಗಾಗಿ ವರ್ಷದ ಹಿಂದೆಯೇ ಅರ್ಜಿ ಸಲ್ಲಿಸಿದ್ದೇ, ಈಗ ಪಿಂಚಣಿಯೂ ನಿಂತು ಹೋಗಿದೆ ಎಂದು ಅಳಲು ತೋಡಿಕೊಂಡಿದ್ದರು. ವೃದ್ಧೆಯನ್ನು ಸಂತೈಸಿದ ಗೌರಿಶಂಕರ್, ಮನೆ ಮಂಜೂರು ಮಾಡಿಸುವ ಜವಾಬ್ದಾರಿ ನನ್ನದು, ನಿಂತಿರುವ ಪಿಂಚಣಿಯನ್ನು ಮಂಜೂರು ಮಾಡಿಕೊಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.