ಓಂಶ್ರೀ ಕೂಡಕಂಡಿ ಅವರಿಗೆ ಗೌರಮ್ಮ ಪ್ರಶಸ್ತಿ ಪ್ರದಾನ

gowramma
Published on

ಮಡಿಕೇರಿ:

ಕೇವಲ 27 ವರ್ಷ ಬದುಕಿದ್ದ ಕೊಡಗಿನ ಗೌರಮ್ಮ ಸಾಹಿತ್ಯ ವಲಯದಲ್ಲಿ ಮೂಡಿಸಿದ ಸಂಚಲನ ಅತ್ಯಾದ್ಭುತ ಮತ್ತು ಅನನ್ಯ ಎಂದು ಮೈಸೂರು ಯುವರಾಜ ಕಾಲೇಜು ಉಪನ್ಯಾಸಕಿ ಎಚ್. ನಿವೇದಿತಾ ಹೇಳಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಮುರ್ನಾಡು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮೂರ್ನಾಡು ಪಿಎಂ ಶ್ರೀ ಮಾದರಿ ಪ್ರಾಥಮಿಕ ಶಾಲೆ ಸಂಯುಕ್ತ ಆಶ್ರಯದಲ್ಲಿ ಶನಿವಾರ ಮೂರ್ನಾಡುವಿನಲ್ಲಿ ನಡೆದ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗೌರಮ್ಮ ತಮ್ಮ ಅತಿ ಸಣ್ಣ ಜೀವಿತಾವಧಿಯಲ್ಲಿ 21 ಕಥೆಗಳನ್ನು ಬರೆದರು. ಅದರಲ್ಲಿ ಮಹಿಳಾ ಸ್ವಾತಂತ್ರ‍್ಯ, ವಿಧವಾ ವಿವಾಹ, ಬಾಲ್ಯ ವಿವಾಹ, ವಿಧವಾ ಸಮಸ್ಯೆಗಳ ಬಗ್ಗೆ ಬರೆದಿದ್ದಾರೆ. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 21 ವರ್ಷಗಳಿಂದ ಕೊಡಗಿನ ಲೇಖಕಿಯರಿಗೆ ಕೊಡಗಿನ ಗೌರಮ್ಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಈ ಬಾರಿ ಕೂಡಕಂಡಿ ಓಂ ಶ್ರೀ ದಯಾನಂದ ಅವರ ಪುಟಾಣಿ ರೈಲು ಅಂದದ ಕಥೆಗಳ ಲೋಕದಲ್ಲಿ ಒಂದು ಸುಂದರ ಪಯಣ ಮಕ್ಕಳ ಕಥೆ ಪುಸ್ತಕಕ್ಕೆ ಪ್ರಶಸ್ತಿ ದೊರಕಿರುವುದು ಖುಷಿಯ ವಿಷಯ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಕೊಡಗಿನ ಗೌರಮ್ಮ ಬಹುಮುಖ ಪ್ರತಿಭೆಯ ವ್ಯಕ್ತಿತ್ವ. ಕೇವಲ ಕತೆ ಬರೆಯುವುದು ಮಾತ್ರವಲ್ಲದೆ ಅಂದಿನ ಸಮಾಜ ಸುಧಾರಕರಲ್ಲಿ ಒಬ್ಬರು ಕೂಡ ಹೌದು. ಬಾಲ್ಯ ವಿವಾಹ, ವಿಧವಾ ವಿವಾಹ, ಮಹಿಳೆಯರ ಸಮಸ್ಯೆಗಳ ಕುರಿತು ಶತಮಾನದ ಹಿಂದೆಯೇ ಪ್ರಸ್ತಾಪ ಮಾಡಿದ್ದೂ ಅಲ್ಲದೆ ಸ್ವಾತಂತ್ರ‍್ಯ ಸಂಗ್ರಾಮಕ್ಕೆ ತಮ್ಮ ಮೈ ಮೇಲಿನ ಚಿನ್ನ ನೀಡುವ ಮೂಲಕ ಅಂದಿನ ಜನರಿಗೆ ಮಾದರಿಯಾಗಿದ್ದರು. ಅವರ ಹೆಸರಿನಲ್ಲಿ ಅವರ ಪುತ್ರ ವಸಂತ್ ಅಂದಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷÀ ಟಿ.ಪಿ ರಮೇಶ್ ನೇತೃತ್ವದಲ್ಲಿ ದತ್ತಿ ಪ್ರಶಸ್ತಿ ಸ್ಥಾಪಿಸಿದರು. ಇಲ್ಲಿಯ ತನಕ 22 ಮಹಿಳಾ ಲೇಖಕರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಸ್. ಕುಶನ್ ರೈ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯಿಕವಾಗಿ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ. ಮೂರ್ನಾಡಿನಲ್ಲಿ ಈ ಕಾರ್ಯಕ್ರಮ ನಡೆಸಿದ್ದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಯಾವುದೇ ಕಾರ್ಯಕ್ರಮ ನಮ್ಮೂರಿನಲ್ಲಿ ಹಮ್ಮಿಕೊಂಡರೆ ಅದನ್ನು ಯಶಸ್ವಿಗೊಳಿಸಿ ಕೊಡುವುದಾಗಿ ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕೊಡಗು ಕಸಾಪ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಗೌರಮ್ಮ ದತ್ತಿ ಪ್ರಶಸ್ತಿ ಸ್ಥಾಪಿಸಿದ ದಿನಗಳಲ್ಲಿ ಪ್ರಶಸ್ತಿ ನೀಡಲು ಲೇಖಕರನ್ನು ಹುಡುಕಬೇಕಿತ್ತು, ಆದರೆ ಇಂದು ಪ್ರಶಸ್ತಿಗೆ ಆಹ್ವಾನ ಮಾಡಿದಾಗ 16 ಲೇಖಕರು ತಮ್ಮ ಪುಸ್ತಕಗಳನ್ನು ಕಳುಹಿಸಿಕೊಟ್ಟಿದ್ದರು. ಅವನ್ನು ಜಿಲ್ಲೆಯ ಹಿರಿಯ ಮೂರು ಸಾಹಿತಿಗಳು ಸಂಪೂರ್ಣವಾಗಿ ಓದಿ ನೀಡಿದ ಅಭಿಪ್ರಾಯದಂತೆ ಪ್ರಶಸ್ತಿ ನೀಡಲಾಗಿದೆ. ಮಕ್ಕಳಿಗೆ ಸಾಹಿತ್ಯ ಅಭಿರುಚಿ ಮೂಡಿಸಬೇಕು ಎನ್ನುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕ್ರಮಗಳನ್ನು ಶಾಲಾ ಕಾಲೇಜುಗಳಲ್ಲಿಯೇ ಮಾಡಿಕೊಂಡು ಬರುತ್ತಿದ್ದು ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲೂ ಸಾಹಿತ್ಯಾಸಕ್ತಿ ಮೂಡುತ್ತಿದೆ ಎಂದರು.

ಕೊಡಗು ಕಸಾಪ ನಿಕಟ ಪೂರ್ವ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ ಕೊಡಗಿನ ಗೌರಮ್ಮ ಕೇವಲ ಲೇಖಕಿ ಮಾತ್ರವಾಗಿರಲಿಲ್ಲ ಅಂದಿನ ದಿನಗಳ ಮೌಲ್ಯದ ಕುರಿತು ಹೋರಾಟ ಮಾಡಿದÀ ವ್ಯಕ್ತಿಯಾಗಿದ್ದಾರೆ. ಶತಮಾನದ ಹಿಂದೆಯೇ ಆಂಗ್ಲ ವಿದ್ಯಾಭ್ಯಾಸ ಪಡೆದು ಈಜುಡುಗೆಯಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ಅಂದಿನ ಕಾಲಕ್ಕೆ ಮಾಡ್ರನ್ ಆಗಿದ್ದರು ಎಂದರು.

ಪಿ.ಎA.ಶ್ರೀ. ಮಾದರಿ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಸಿ. ವೆಂಕಪ್ಪ, ಮುಖ್ಯೋಪಾಧ್ಯಾಯಿನಿ ಬಿ.ಎನ್ ಪುಷ್ಪಾವತಿ, ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಮೂರ್ನಾಡು ಹೋಬಳಿ ಕಸಾಪ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್, ಸಮಾಜ ಸೇವಕ ವಿ.ಎಮ್. ಧನಂಜಯ, ಸಿ.ಎಸ್. ಸೂರಜ್ ತಮ್ಮಯ್ಯ, ವಿರಾಜಪೇಟೆ ಸÀರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೂಡಕಂಡಿ ದಯಾನಂದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net