ವಿವಿಯಿಂದ ಮೂವರಿಗೆ ಗೌಡಾ ಘೋಷಣೆ

Published on

ಬಳ್ಳಾರಿ : ಇಲ್ಲಿನ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವ ಹಿನ್ನೆಲೆ ಸಾಹಿತಿ ಡಾ.ವಸುಂಧರಾ ಭೂಪತಿ, ಬಿಕೆಜಿ ಫೌಂಡೇಶನ್ ಬಾವಿಹಳ್ಳಿ ನಾಗನಗೌಡ, ಪ್ರೆಸ್ಟೀಜ್ ಗ್ರೂಪ್‌ನ ಗೌರವಾಧ್ಯಕ್ಷ ಇರ್ಫಾನ್ ರಜಾಕ್ ಅವರಿಗೆ ಸೇರಿ ಮೂವರಿಗೆ ಗೌರವ ಡಾಕ್ಟರೇಟ್ ಘೋಷಿಸಲಾಗಿದೆ ಎಂದು ವಿಎಸ್‌ಕೆ ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ತಿಳಿಸಿದರು.

ಗೌಡಾಗೆ ಧರಂಸಿಂಗ್, ಅಸ್‌ಮ್ ನಹೀಂ, ವಿನೋದ್ ದೊಡ್ಡಣ್ಣನವರ್, ದರೋಜಿ ಈರಮ್ಮ, ಸರಸ್ವತಿ, ಜೆ.ಎಂ.ವೀರಸಂಗಯ್ಯ ಹಾಗೂ ಮೇಲಿನ ಮೂವರು ಸೇರಿ ಒಟ್ಟು ಒಂಬತ್ತು ಅರ್ಜಿಗಳು ಸಲ್ಲಿಕೆಯಾಗಿದ್ದವು. ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆ ಪಡೆದು ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಈ ಮೂವರ ಹೆಸರನ್ನು ಅಂತಿಮಗೊಳಿಸಿ ಆಯ್ಕೆ ಮಾಡಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಮಾರಂಭವು ವಿವಿ ಆವರಣದಲ್ಲಿ ಸೆ.04 ರಂದು ನಡೆಯಲಿದ್ದು, ರಾಜ್ಯಪಾಲ ಥಾವರಚಂದ್ ಗೆಹ್ಲೋತ್ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ. ನವದೆಹಲಿಯ ಇಂಟರ್ ಯುನಿವರ್ಸಿಟಿ ಎಕ್ಸಲರೇಟರ್ ನಿರ್ದೇಶಕ ಪ್ರೊ.ಅವಿನಾಶ್ ಚಂದ್ರ ಪಾಂಡೆ ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ ಎಂದರು.

ಉದ್ಯಮಿ ಇರ್ಫಾನ್ ರಜಾಕ್ ಮೂಲತಃ ಬೆಂಗಳೂರಿನ ನಿವಾಸಿಯಾಗಿದ್ದು, ನಾಲ್ಕು ದಶಕಗಳ ಕಾಲ ವಾಣಿಜ್ಯ, ವ್ಯಾಪಾರ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಯಶ್ವಸಿಯಾಗಿ ಹೂಡಿಕೆ ನಡೆಸಿ ನಾಡಿನ ಖ್ಯಾತ ಉದ್ಯಮಿಗಳಾಗಿ ಮುನ್ನಡೆದಿದ್ದಾರೆ. ಕರ್ನಾಟಕ ರಾಜ್ಯೋತ್ಸವ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದು ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ ಎಂದರು.

ಸಾಹಿತಿ ಡಾ.ವಸಂಧರಾ ಭೂಪತಿ ಸಂಡೂರಿನವರಾಗಿದ್ದು ತಮ್ಮ ವಿಶಿಷ್ಟ ವೈದ್ಯಕೀಯ ಸೇವೆ, ಸಾಹಿತ್ಯ, ಸಮಾಜ ಸೇವೆ ಮತ್ತು ಪತ್ರಿಕಾ ಅಂಕಣಕಾರರಾಗಿ ಗುರುತಿಸಿಕೊಂಡಿದ್ದಾರೆ. ಆರೋಗ್ಯ, ಶಿಬಿರ, ವೈದ್ಯಕೀಯ ಸಾಹಿತ್ಯವನ್ನು ಜನ ಸಾಮಾನ್ಯರಿಗೆ ತಲುಪಿಸುವಲ್ಲಿ ಅಪಾರ ಸಾಧನೆಗೈದಿದ್ದಾರೆ. 65ಕ್ಕೂ ಹೆಚ್ಚು ಆರೋಗ್ಯ ಕೃತಿಗಳು ಇಂಗ್ಲಿಷ್ ಹಾಗೂ ಹಿಂದಿ ಭಾಷೆಗೆ ಅನುವಾದಗೊಂಡಿವೆ. ಇವರ ಸೇವೆಗೆ ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳು ಮುಡಿಗೇರಿವೆ ಎಂದರು.

ಬಾವಿಹಳ್ಳಿ ನಾಗನಗೌಡ ಗಣಿನಾಡಿನ ಪ್ರಸಿದ್ದಿ ಉದ್ಯಮಿಯಾಗಿದ್ದು ಬಿಕೆಜಿ ಫೌಂಡೇಶನ್ ಮೂಲಕ ಶಿಕ್ಷಣ ಅಭಿವೃದ್ಧಿ, ಸಾಮಾಜಿಕ ಸೇವೆ ಮತ್ತು ಸಾಹಿತ್ಯ- ಸಾಂಸ್ಕ್ರತಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆರೋಗ್ಯ ಶಿಬಿರಗಳ ಮೂಲಕ ಕ್ಷಯರೋಗಿಗಳ ಚಿಕಿತ್ಸೆಗೆ ಶ್ರಮಿಸಿದ್ದಾರೆ. ಸಮಾಜಮುಖಿ ಕೆಲಸಗಳದಿಂದ ಸಮುದಾಯಕ್ಕೆ ದೇವಸ್ಥಾನಗಳ ಜೀರ್ಣೋದ್ದಾರಕ್ಕೆ ಮೂಲಭೂತ ಸೌಕರ್ಯಗಳ ಕಲ್ಪಿಸಲು ಕೊಡುಗೆ ನೀಡಿದ್ದಾರೆ ಎಂದು ಪರಿಚಯಿಸಿದರು.

ಈ ಬಾರಿಯ ಘಟಿಕೋತ್ಸವದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರದ ವಿವಿಧ ವಿಭಾಗಗಳಲ್ಲಿ 42 ವಿದ್ಯಾರ್ಥಿಗಳು 51 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ನಾನಾ ವಿಭಾಗಗಳಿಂದ ಒಟ್ಟು 57 ಸಂಶೋಧನಾರ್ಥಿಗಳು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಎಲ್ಲ ವಿಭಾಗಗಳ ಸ್ನಾತಕ ಪದವಿಯ 80 ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿಯಿಂದ 75 ಒಟ್ಟು 155 ವಿದ್ಯಾರ್ಥಿಗಳು ರ‌್ಯಾಂಕ್ ಪ್ರಮಾಣ ಪತ್ರಗಳನ್ನು ಪಡೆಯಲಿದ್ದಾರೆ. ವಿವಿಯ ವಾಣಿಜ್ಯ ಶಾಸ್ತ್ರದ ಪದವಿ ವಿದ್ಯಾರ್ಥಿ ಎನ್.ಹಂಸ ನಾಲ್ಕು, ಔದ್ಯೋಗಿಕ ರಸಾಯನಶಾಸ್ತ್ರ ವಿಭಾಗದ ರಾಜೇಶ್ವರಿ ಮೂರು ಹಾಗೂ ಭೌತಶಾಸ್ತ್ರದ ಮನೋಜ್, ರಸಾಯನ ಶಾಸ್ತ್ರದ ಸುಹಾನಾ ತಸ್ಲೀಮ್, ಸಮಾಜ ಕಾರ್ಯ ವಿಭಾಗದ ಶಿಲ್ಪಾ, ಬಿ.ಕಾಂ. ಪದವಿಯ ವಿಷ್ಣು ಪ್ರಿಯಾ, ಬಿಎಸ್‌ಸಿಯ ಮಹಮ್ಮದ್ ನಕೀಬಲಿ ಸೇರಿ ಐವರು ತಲಾ ಎರಡು ಚಿನ್ನದ ಪದಕ ಪಡೆಯಲಿದ್ದಾರೆ ಎಂದರು.

ವಿವಿಯಲ್ಲಿ ಒಟ್ಟು 19179 ವಿದ್ಯಾರ್ಥಿಗಳು ಸ್ನಾತಕ ಪದವಿ ಹಾಗೂ 1845 ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ ಎಂದರು. ವಿವಿ ಕುಲಸಚಿವರಾದ ಪ್ರೊ.ಎನ್.ಎಂ.ಸಾಲಿ, ಸಿ.ನಾಗರಾಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net