ಗೌಡಳ್ಳಿ ಸಹಕಾರ ಸಂಘಕ್ಕೆ 1.18 ಕೋಟಿ ರೂ.ಲಾಭ

01
ಸೋಮವಾರಪೇಟೆ ತಾಲೂಕಿನ ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಸಂಘದ ಅಧ್ಯಕ್ಷ ಎಸ್.ಬಿ.ಭರತ್ ಕುಮಾರ್ ಮಾತನಾಡಿದರು. ನೇತ್ರಾವತಿ, ಸುರೇಶ್, ಮೊಗಪ್ಪ, ಶಿವಪ್ರಕಾಶ್, ಹೂವಯ್ಯ, ನವೀನ್ ಇದ್ದರು.
Published on

ಸೋಮವಾರಪೇಟ: 512ನೇ ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2024-25ನೇ ಸಾಲಿನಲ್ಲಿ 1.18 ಕೋಟಿ ರೂ.ಲಾಭಗಳಿಸಿದ್ದು, ಗ್ರಾಮೀಣ ಭಾಗದ ಸಹಕಾರ ಸಂಘ ಅತಿ ಹೆಚ್ಚಿನ ಲಾಭಗಳಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸಂಘದ ಅಧ್ಯಕ್ಷ ಎಸ್.ಬಿ.ಭರತ್‌ಕುಮಾರ್ ಹೇಳಿದರು.

ಗೌಡಳ್ಳಿ ಬಿಜಿಎಸ್ ಶಾಲಾ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ವಾರ್ಷಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗೌಡಳ್ಳಿ, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಘದ ಸದಸ್ಯರು ಸಕಾಲದಲ್ಲಿ ಸಾಲವನ್ನು ಮರುಪಾವತಿಸಿದ ಹಿನ್ನೆಲೆಯಲ್ಲಿ ಸಂಘ ಅಭಿವೃದ್ಧಿಯ ಪಥದಲ್ಲಿದ್ದು, ಪ್ರಸಕ್ತ ಸಾಲಿನಲ್ಲಿ ಶೇ.25ರಷ್ಟು ಲಾಭಾಂಶವನ್ನು ಸದಸ್ಯರಿಗೆ ವಿತರಿಸಲಾಗುವುದು ಎಂದು ಹೇಳಿದರು.

ಸಂಘದಲ್ಲಿ 2683 ಸದಸ್ಯರಿದ್ದು, 3,04,50,090 ರೂ.ಪಾಲು ಬಂಡವಾಳವಿದೆ. 23,90,80,507 ರೂ. ಠೇವಣಿ ಇದೆ. 2024-25ನೇ ಸಾಲಿನಲ್ಲಿ 1086 ಸದಸ್ಯರಿಗೆ 24,16,52,000 ರೂ. ಕೆಸಿಸಿ ಸಾಲ ನೀಡಿದ್ದು, ಶೇ.100 ರಷ್ಟು ಮರುಪಾವತಿಯಾಗಿದೆ. 1566 ಸದಸ್ಯರು ಯಶಸ್ವಿನಿ ಅರೋಗ್ಯ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಸಂಘಕ್ಕೆ ಸೇರಿದ 2 ಮಾರಾಟ ಕೇಂದ್ರಗಳಲ್ಲಿ ಸರ್ಕಾರದ ಪಡಿತರ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಸಂಘಕ್ಕೆ 1.06 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಒಳ ವಿನ್ಯಾಸ ಕೆಲಸ ನಡೆಯುತ್ತಿದೆ. ಸದಸ್ಯರ ಹಿತದೃಷ್ಟಿಯಿಂದ ಕಡಿಮೆ ಬಡ್ಡಿ ದರದಲ್ಲಿ ಚಿನ್ನಾಭರಣ ಸಾಲ, ಗೊಬ್ಬರ, ಪಿಗ್ಮಿ ಠೇವಣಿ ಆಧಾರಿತ ಹಾಗೂ ವ್ಯಾಪಾರಾಭಿವೃದ್ಧಿ ಸಾಲ ನೀಡಲಾಗುತ್ತಿದೆ ಎಂದು ಹೇಳಿದರು.

ಸಂಘದ ಅಭಿವೃದ್ಧಿ ಬಗ್ಗೆ ಸದಸ್ಯರು ಚರ್ಚಿಸಿದರು. ಅತಿ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಸಂಘದ ಉಪಾಧ್ಯಕ್ಷೆ ಎಚ್.ಎಸ್.ನೇತ್ರಾವತಿ, ಎಚ್.ಆರ್.ಸುರೇಶ್, ಬಿ.ಪಿ.ಮೊಗಪ್ಪ, ಕೆ.ಕೆ.ಶಿವಪ್ರಕಾಶ್, ಜಿ.ಎಂ.ಹೂವಯ್ಯ, ಎ.ಎಸ್.ನವೀನ್ ಕುಮಾರ್, ಜಿ.ಎಸ್.ನಾಗರಾಜು, ಕೆ.ಜಿ.ದಿನೇಶ್, ಎಸ್.ಸಿ.ಸುನೀತಾ, ಜಿ.ಈ.ಸುರೇಶ್, ಜಿ.ಬಿ.ಗಿರೀಶ್, ಕೆ.ಎಲ್.ರಕ್ಷಿತ್, ಸಿ.ಇ.ಒ., ಎಂ.ಎಚ್.ಕಿರಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net