

ಕುಶಾಲನಗರ:
ಕುಶಾಲನಗರ ಗೌಡ ಸಮಾಜ ವತಿಯಿಂದ ಸಮೀಪದ ಬಸವನಹಳ್ಳಿಯಲ್ಲಿ 9 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನ ಮತ್ತು ವಾಣಿಜ್ಯ ಸಂಕೀರ್ಣಕ್ಕೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮತ್ತು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಗುರುವಾರ ಭೂಮಿಪೂಜೆ ನೆರವೇರಿಸಿದರು.
ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮಂತರ್ ಗೌಡ, ಸಮಾಜದ ಅಭಿವೃದ್ಧಿಗೆ ಸಮುದಾಯಗಳ ಕೊಡುಗೆ ಅತಿ ಮುಖ್ಯ. ದೂರದೃಷ್ಠಿಯ ಚಿಂತನೆಗಳ ಯೋಜನೆಗಳು ಸಮಾಜಕ್ಕೆ ಅನುಕೂಲ ಒದಗಿಸಲಿದೆ. ಆಧುನಿಕತೆಗೆ ತಕ್ಕಂತೆ ಯೋಜನೆಗಳು ರೂಪುಗೊಳ್ಳಬೇಕಿದೆ.
ಈ ನಿಟ್ಟಿನಲ್ಲಿ ಕುಶಾಲನಗರ ಗೌಡ ಸಮಾಜ ಕೈಗೊಂಡಿರುವ ಯೋಜನೆ ಯಶಸ್ಸು ಕಾಣುವಂತಾಗಲಿ. ಸರ್ಕಾರದ ಮಟ್ಟದಿಂದ ದೊರಕಬಹುದಾದ ಅಗತ್ಯ ಅನುದಾನ ಹಾಗೂ ಸಹಕಾರ ಒದಗಿಸುವುದಾಗಿ ಹೇಳಿದರು.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮಾತನಾಡಿ, ಯಾವುದೇ ಸಮುದಾಯ ಅಭಿವೃದ್ದಿ ಹೊಂದಲು ಮುಖಂಡರು ಹಾಗೂ ಸದಸ್ಯರುಗಳ ನಡುವೆ ಹೊಂದಾಣಿಕೆ, ಸಮನ್ವಯತೆ ಮುಖ್ಯ. ಪ್ರೀತಿ ವಿಶ್ವಾಸದಿಂದ ಸಮುದಾಯ ಅಭಿವೃದ್ಧಿಯೊಂದಿಗೆ ಸಮಾಜದ ಅಭಿವೃದ್ಧಿಗೂ ಕೂಡ ಮುಂದಾಗಬೇಕಿದೆ. ಇತರೆ ಜನಾಂಗಗಳಿಗೂ ಕೊಡುಗೆ ನೀಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ. ಸಂಘರ್ಷಕ್ಕೆ ಎಡೆಮಾಡಿಕೊಡದೆ ಸಾಮರಸ್ಯ, ಸಹೋದರತ್ವದಿಂದ ಎಲ್ಲರೂ ಸಂಘಟಿತರಾಗಬೇಕು ಎಂದು ಹೇಳಿದರು.
ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ಮಾತನಾಡಿ ನೂತನ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ, ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಅಂಬೇಕಲ್ ನವೀನ್, ಗುಡ್ಡೆಹೊಸೂರು ಗ್ರಾಪಂ ಅಧ್ಯಕ್ಷೆ ಸೌಮ್ಯಾ, ಉಪಾಧ್ಯಕ್ಷ ಪ್ರವೀಣ್ ಕುಮಾರ್, ಗುಡ್ಡೆಹೊಸೂರು ಗೌಡ ಸಮಾಜದ ಅಧ್ಯಕ್ಷ ಗುಡ್ಡೆಮನೆ ವಿಶ್ವಕುಮಾರ್, ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಮುಖಂಡ ಬಿ.ಬಿ. ಭಾರತೀಶ್, ಆರ್ಕಿಟೆಕ್ಟ್ ಮನೋಜ್ ಕುಮಾರ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಅಪ್ಪಯ್ಯ, ಗೌಡ ಸಮಾಜದ ಆಡಳಿತ ಮಂಡಳಿ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳು ಹಾಗೂ ಅಂಗ ಸಂಸ್ಥೆಗಳ ಪ್ರಮುಖರು, ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.