

ಮಡಿಕೇರಿ: ಗೌಡ ಫುಟ್ಬಾಲ್ ಅಕಾಡೆಮಿ ಕೊಡಗು ಇವರ ವತಿಯಿಂದ ೭ನೇ ವರ್ಷದ ಗೌಡ ಫುಟ್ಬಾಲ್ ಟ್ರೋಫಿ ಪಂದ್ಯಾಟದಲ್ಲಿ ಮುಕ್ಕಾಟಿ ’ಎ’ ತಂಡ ಚಾಂಪಿಯನ್ನಾಗಿ ಹೊರಹೊಮ್ಮಿತು.
ಮರಗೋಡು ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಫೈನಲ್ ಪಂದ್ಯಾಟದಲ್ಲಿ ಬೊಳ್ಳೂರು ಮತ್ತು ಮುಕ್ಕಾಟಿ ಎ ತಂಡಗಳು ತೀವ್ರ ಹಣಾಹಣಿ ನಡುವೆ ೨-೨ ಗೋಲುಗಳ ಸಮಬಲ ಸಾಧಿಸಿತು. ಬೊಳ್ಳೂರು ತಂಡದ ಪರ ಮೋನೀಶ್ ಹಾಗೂ ಗಗನ್ ತಲಾ ೧ ಗೋಲು ದಾಖಲಿಸಿದರೆ, ಮುಕ್ಕಾಟಿ ಎ ತಂಡದ ಪರ ಮೋನೀಶ್ ಹಾಗೂ ಸೋನಾ ತಲಾ ೧ ಗೋಲು ದಾಖಲಿಸಿದರು. ನಂತರ ನಡೆದ ಟ್ರೈ ಬ್ರೇಕರ್‌ನಲ್ಲಿ ಮುಕ್ಕಾಟಿ ಎ ತಂಡ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿತು.
ಇದಕ್ಕೂ ಮೊದಲು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮುಕ್ಕಾಟಿ ಎ ತಂಡ ಕೊಳಂಬೆ ತಂಡವನ್ನು ೨-೧ ಗೋಲುಗಳಿಂದ ಮಣಿಸಿತು. ಕೊಳಂಬೆ ತಂಡದ ಪರ ಗಿರೀಶ್ ೧ ಗೋಲು ದಾಖಲಿಸಿದರೆ, ಮುಕ್ಕಾಟಿ ಎ ತಂಡದ ಪರ ತರುಣ್ ಹಾಗೂ ಮೋನೀಶ್ ತಲಾ ೧ ಗೋಲು ಹೊಡೆದು ಫೈನಲ್ ಹಾದಿ ಸುಗಮಗೊಳಿಸಿದರು.
ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮರದಾಳು ಮತ್ತು ಬೊಳ್ಳೂರು ತಂಡಗಳು ಯಾವುದೇ ಗೋಲು ದಾಖಲಿಸದೇ ಸಮಬಲ ಸಾಧಿಸಿತು. ನಂತರ ನಡೆದ ಟ್ರೈ ಬ್ರೇಕರ್‌ನಲ್ಲಿ ಬೊಳ್ಳೂರು ತಂಡ ಫೈನಲ್ ಪ್ರವೇಶ ಪಡೆಯಿತು.
ಕಟ್ಟೆಮಾಡು ತಂಡಕ್ಕೆ ಯುನಿಟಿ ಕಪ್: ಗೌಡ ಫುಟ್ಬಾಲ್ ಅಕಾಡೆಮಿ ಕೊಡಗು ಇವರ ವತಿಯಿಂದ ಹಮ್ಮಿಕೊಂಡು ಬರುತ್ತಿರುವ ಮೂರನೇ ವರ್ಷದ ಯುನಿಟಿ ಕಪ್ ಪಂದ್ಯಾಟದಲ್ಲಿ ಕಟ್ಟೆಮಾಡು ಗ್ರಾಮದ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ಪಂದ್ಯದಲ್ಲಿ ಕಟ್ಟೆಮಾಡು ತಂಡ ಅರೆಕಾಡು ತಂಡವನ್ನು ೧-೦ ಗೋಲುಗಳಿಂದ ಮಣಿಸಿತು. ಕಟ್ಟೆಮಾಡು ತಂಡದ ಪರ ಜೈನೀರ ರೋಶನ್ ೧ ಗೋಲು ಹೊಡೆಯುವುದರ ಮೂಲಕ ಫೈನಲ್ ಪಂದ್ಯ ಗೆದ್ದು ಚಾಂಪಿಯನ್ನಾಗಿ ಹೊರಹೊಮ್ಮಿತು.