ಗೌಡ ಫುಟ್ಬಾಲ್: ಇಂದು ಫೈನಲ್ ಹಣಾಹಣಿ

MDK01
Published on

ಮಡಿಕೇರಿ: ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಮರಗೋಡು ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಪಂದ್ಯದಲ್ಲಿ ಬಡುವಂಡ್ರ, ಪೊನ್ನಚ್ಚನ, ಪೊಕ್ಕೂಳಂಡ್ರ, ಕಟ್ಟೆಮನೆ ತಂಡಗಳು ಪ್ರಶಸ್ತಿಗಾಗಿ ಇಂದು ಸೆಣಸಾಟ ನಡೆಸಲಿದೆ.


ದಿನದ ಮೊದಲ ಫ್ರೀ ಕ್ವಾರ್ಟರ್ ಪಂದ್ಯದಲ್ಲಿ ಮುಕ್ಕಾಟಿ ಎ ಮತ್ತು ಯಾಲದಾಳು ತಂಡಗಳು ಯಾವುದೇ ಗೋಲು ದಾಖಲಿಸದೇ ಇತ್ತಂಡಗಳು ಸಮಬಲ ಸಾಧಿಸಿತು. ನಂತರ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ಮುಕ್ಕಾಟಿ ಎ ತಂಡ ೪-೩ ಗೋಲುಗಳಿಂದ ಯಾಲದಾಳು ತಂಡವನ್ನು ಮಣಿಸಿ ಗೆಲುವು ಸಾಧಿಸಿತು. ಮತ್ತೊಂದು ಪಂದ್ಯದಲ್ಲಿ ಬಡುವಂಡ್ರ ತಂಡ ಬಿಳಿಯಂಡ್ರ ತಂಡವನ್ನು ೨-೦ ಗೋಲುಗಳಿಂದ ಮಣಿಸಿತು. ತಂಡದ ಪರ ಸುಜಯ್, ಮಿಲನ್ ತಲಾ ಒಂದೊಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು.


ಚೆಟ್ಟಿಮಾಡ ಮತ್ತು ಕೊಳಂಬೆ ನಡುವಿನ ಪಂದ್ಯದಲ್ಲಿ ಚೆಟ್ಟಿಮಾಡ ತಂಡ ಕೊಳಂಬೆ ತಂಡವನ್ನು ೨-೧ ಗೋಲುಗಳಿಂದ ಸೋಲಿಸಿತು. ಚೆಟ್ಟಿಮಾಡ ಪರ ರೋನಿ, ದಿಲನ್ ತಲಾ ಒಂದೊಂದು ಗೋಲು ದಾಖಲಿಸಿದರೆ, ಕೊಳಂಬೆ ಪರ ಗಿರೀಶ್ ಏಕೈಕ ಗೋಲು ದಾಖಲಿಸಿದರು. ಮತ್ತೊಂದು ಪಂದ್ಯದಲ್ಲಿ ಪೋಕ್ಕೂಳಂಡ್ರ ತಂಡ ಕುಯ್ಯಮುಡಿ ತಂಡವನ್ನು ೧-೦ ಗೋಲುಗಳಿಂದ ಸೋಲಿಸಿತು. ತಂಡದ ಪರ ಪ್ರವೀಣ್ ೧ ಗೋಲು ದಾಖಲಿಸಿದರು.


ಪಡಿಕಲ್ ಮತ್ತು ದೇವಜನ ತಂಡದ ನಡುವಿನ ಪಂದ್ಯದಲ್ಲಿ ದೇವಜನ ತಂಡ ೩-೦ ಗೋಲುಗಳಿಂದ ಸೋಲಿಸಿತು. ತಂಡದ ಪರ ಡಿ.ಡಿ.ಪುನೀತ್, ಕಾರ್ತಿಕ್, ಪುನಿತ್ ತಲಾ ಒಂದೊಂದು ಗೋಲು ದಾಖಲಿಸಿದರು. ಮತ್ತೊಂದು ಪಂದ್ಯದಲ್ಲಿ ಪೋನ್ನಚ್ಚನ ತಂಡ ಪೋಡನೋಳನ ತಂಡವನ್ನು ೩-೧ ಗೋಲು ಗೋಲುಗಳಿಂದ ಮಣಿಸಿತು. ಪೊನ್ನಚ್ಚನ ತಂಡದ ಪರ ಶ್ರೀನಿವಾಸ್, ನಿಶಾಂತ್, ಲಿಕಿನ್ ತಲಾ ಒಂದೊಂದು ಗೋಲು ದಾಖಲಿಸಿದರೆ, ಪೋಡನೋಳನ ತಂಡದ ಪರ ವಿಶಾಲ್ ಏಕೈಕ ಗೋಲು ದಾಖಲಿಸಿದರು.


ಕೋಳಿಬೈಲು ಮತ್ತು ಕಲ್ಲುಮುಟ್ಲು ನಡುವಿನ ಪಂದ್ಯದಲ್ಲಿ ಕಲ್ಲುಮುಟ್ಲು ತಂಡ ೪-೦ ಗೋಲುಗಳಿಂದ ಭರ್ಜರಿ ಗೆಲುವು ಸಾಧಿಸಿತು. ತಂಡದ ಪರ ಕವನ್‌೨, ಭವನ್, ಪ್ರಜ್ವಲ್ ತಲಾ ಒಂದೊಂದು ಗೋಲು ದಾಖಲಿಸಿದರು. ಮತ್ತೊಂದು ಪಂದ್ಯದಲ್ಲಿ ಕಟ್ಟೆಮನೆ ಮತ್ತು ಕಾಂಗೀರ ತಂಡಗಳು ಯಾವುದೇ ಗೋಲು ದಾಖಲಿಸಿದೇ ಸಮಬಲ ಸಾಧಿಸಿತು. ನಂತರ ಪೆನಾಲ್ಟಿ ಶೂಟೌಟ್‌ನಲ್ಲಿ ಕಟ್ಟೆಮನೆ ತಂಡ ೫-೩ ಗೋಲುಗಳಿಂದ ಕಾಂಗೀರ ತಂಡವನ್ನು ಮಣಿಸಿತು.


ಕ್ವಾರ್ಟರ್ ಫೈನಲ್ ಫಲಿತಾಂಶ: ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಬಡುವಂಡ್ರ ತಂಡ ಮುಕ್ಕಾಟಿ ಎ ತಂಡವನ್ನು ೨-೧ ಗೋಲುಗಳಿಂದ ಮಣಿಸಿ ಸೆಮಿಫೈನಲ್ ಪ್ರವೇಶ ಪಡೆಯಿತು. ಬಡುವಂಡ್ರ ಪರ ಸುಜಯ್ ೨ ಗೋಲು ದಾಖಲಿಸಿದರೆ, ಮುಕ್ಕಾಟಿ ಎ ಪರ ತರುಣ್ ಏಕೈಕ ಗೋಲು ದಾಖಲಿಸಿದರು. ಎರಡನೇ ಪಂದ್ಯದಲ್ಲಿ ಪೊಕ್ಕೂಳಂಡ್ರ ಮತ್ತು ಚೆಟ್ಟಿಮಾಡಗಳು ೧-೧ ಗೋಲು ದಾಖಲಿಸಿ ಸಮಬಲ ಸಾಧಿಸಿತು. ಪರಿಣಾಮ ಪೆನಾಲ್ಟಿ ಶೂಟೌಟ್‌ನಲ್ಲಿ ಪೊಕ್ಕೂಳಂಡ್ರ ತಂಡ ೪-೩ ಗೋಲುಗಳಿಂದ ಚೆಟ್ಟಿಮಾಡ ತಂಡವನ್ನು ಸೋಲಿಸಿತು.


೩ನೇ ಪಂದ್ಯದಲ್ಲಿ ದೇವಜನ ಮತ್ತು ಪೊನ್ನಚ್ಚನ ತಂಡಗಳ ನಡುವಿನ ಪಂದ್ಯದಲ್ಲಿ ಇತ್ತಂಡಗಳು ೨-೨ ಗೋಲುಗಳ ಸಮಬಲ ಸಾಧಿಸಿತು. ನಂತರ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ಪೊನ್ನಚ್ಚನ ತಂಡ ೩-೨ ಗೋಲುಗಳಿಂದ ದೇವಜನ ತಂಡವನ್ನು ಮಣಿಸಿತು. ೪ನೇ ಹಾಗೂ ಕೊನೆಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕಟ್ಟೆಮನೆ ತಂಡ ಕಲ್ಲುಮುಟ್ಲು ತಂಡವನ್ನು ೨-೦ ಗೋಲುಗಳಿಂದ ಸೋಲಿಸಿತು. ತಂಡದ ಪರ ಪೀತಂ ೨ ಗೋಲು ದಾಖಲಿಸಿ ಸೆಮಿಫೈನಲ್ ಹಂತಕ್ಕೇರಲು ಕಾರಣರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net