ಗೌಡ ಸಮಾಜ ಮುಖಂಡರಿಂದ ಶಾಸಕರ ಭೇಟಿ

gowda samaja
Published on

ಮಡಿಕೇರಿ: ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರನ್ನು ಬೆಂಗಳೂರಿನ ವಿಧಾನಸೌಧದ ಕಚೇರಿಯಲ್ಲಿ ಗೌಡ ಸಮಾಜ ಮುಖಂಡರು ಮಂಗಳವಾರ ಭೇಟಿಯಾದರು.

ಅರೆಭಾಷೆ ಗೌಡ ಸಮಾಜದ ಪ್ರಮುಖರಾದ ಸೂರ್ತಲೆ ಸೋಮಣ್ಣ ಮಾತನಾಡಿ, ಈ ಹಿಂದಿನ ಸರ್ಕಾರದಲ್ಲಿ ಸಿದ್ದರಾಮಯ್ಯರವರು ಮುಖ್ಯಮಂತ್ರಿ ಆಗಿದ್ದ ಸಂದರ್ಭ ಗೌಡ ಸಮಾಜಕ್ಕೆ ರೂ. ೭೫ ಲಕ್ಷ ಗಳನ್ನು ನೀಡಿದ್ದರು. ಇಲ್ಲಿಯವರೆಗೆ ಅರೆ ಭಾಷೆ ಗೌಡ ಸಮಾಜಕ್ಕೆ ಕಾಂಗ್ರೆಸ್ ಪಕ್ಷವೇ ಅನುಕೂಲ ಮಾಡಿದೆ. ಕೊಡಗು ಜಿಲ್ಲೆಯಲ್ಲಿ ನೆಲೆಸಿರುವ ಅರೆಭಾಷೆಯ ಗೌಡ ಜನಾಂಗಕ್ಕೆ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಕ್ರೀಡಾ ಕೇಂದ್ರದ ಸ್ಥಾಪನೆಗಾಗಿ ಮದೆನಾಡು ಗ್ರಾಮದ ಸರ್ವೆ ನಂಬರ್ ೯೮/೧ ರ ಪೈಸಾರಿ ಜಾಗದಲ್ಲಿ ಖಾಲಿಯಿರುವ ೧೩ ಎಕರೆ ಜಾಗವನ್ನು, ಕೊಡಗು ಗೌಡ ಸಮಾಜ ಮಡಿಕೇರಿ, ಇವರಿಗೆ ಮಂಜೂರು ಮಾಡಲು ಮನವಿ ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಸಮಾಜದ ಪ್ರಮುಖರ ಈ ಬೇಡಿಕೆಯನ್ನು ಸಚಿವ ಸಂಪುಟದ ಮುಂದಿಟ್ಟು, ಮುಂದಿನ ದಿನಗಳಲ್ಲಿ ಮಂಜೂರು ಮಾಡುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ, ಗೌಡ ಸಮಾಜದ ಪ್ರಮುಖರಾದ ಗಿರೀಶ್, ಬಿ.ಎಸ್.ಆನಂದ್, ರಾಜೇಂದ್ರ, ಅನಂತ್ ಕುಮಾರ್, ವಸಂತ, ಸಂದೀಪ್, ಸೀತಾರಾಮ್, ಶ್ರೀಮತಿ ದಮಯಂತಿ ಮುಂತಾದ ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net