ಅರೆಭಾಷಿಕರು ಗೌಡ (GOWDA) ಎಂದು ನಮೂದಿಸಿ

gowda
Published on

ಮಡಿಕೇರಿ:

ಅರೆಭಾಷಿಕ ಗೌಡ ಜನಾಂಗದವರು ಪ್ರಸ್ತುತ ನಡೆಯಲಿರುವ ಕರ್ನಾಟಕ ರಾಜ್ಯ ಸರ್ಕಾರದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಗಣತಿಯಲ್ಲಿ ಮತ್ತು ಮುಂದೆ ನಡೆಯಲಿರುವ ಕೇಂದ್ರ ಸರ್ಕಾರದ ಜಾತಿ ಗಣತಿಯಲ್ಲಿ ಜಾತಿಯ ಕಲಾಂನಲ್ಲಿ GOWDA (ಗೌಡ)ಎಂದು, ಉಪಜಾತಿ ಅರೆಭಾಷೆ ಗೌಡ, ಮಾತೃ ಭಾಷೆ ಅರೆಭಾಷೆ ಎಂದು ನಮೂದಿಸುವಂತೆ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮೂಲತಃ ಗೌಡರು ಒಕ್ಕಲಿಗ ಸಮುದಾಯದ ಭಾಗವಾಗಿದ್ದರೂ, ಅರೆಭಾಷೆ ಗೌಡರ ಶೈಕ್ಷಣಿಕ ಮತ್ತು ಕಂದಾಯ ಸೇರಿದಂತೆ ಎಲ್ಲಾ ಮೂಲ ದಾಖಲೆಗಳಲ್ಲಿ GOWDA ಎಂದೇ ನಮೂದಾಗಿರುತ್ತದೆ. ಈಗ ಬದಲಾಯಿಸಿ ಮಾಹಿತಿ ನೀಡಿದರೆ ಮುಂದಿನ ದಿನಗಳಲ್ಲಿ ತೊಂದರೆ ಅನುಭವಿಸುವ ಸಾಧ್ಯತೆ ಇದೆ. ಈ ದಿಶೆಯಲ್ಲಿ ಬೆಂಗಳೂರು, ಮೈಸೂರು, ಮಡಿಕೇರಿ ಹಾಗೂ ಪುತ್ತೂರಿನಲ್ಲಿ ಸಮದಾಯದ ಸಭೆಗಳನ್ನು ನಡೆಸಿ, ಕೊಡಗಿನ ಎಲ್ಲಾ ಗೌಡ ಸಮಾಜಗಳೊಂದಿಗೆ ಸಾಧಕ ಬಾಧಕಗಳನ್ನು ಚರ್ಚಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಗಣತಿಯಲ್ಲಿ ತಮ್ಮ ಜಾತಿಗೆ ಇರುವ ಇನ್ನೊಂದು ಹೆಸರು ಎಂಬ ಕಾಲಂ ಸಹ ಇದ್ದು, ಅಲ್ಲಿ ಒಕ್ಕಲಿಗ ಎಂದು ನಮೂದಿಸಬೇಕು. ಹಾಗೆಯೇ ಎಲ್ಲ ಮೂಲ ದಾಖಲೆಗಳನ್ನು ಒಕ್ಕಲಿಗ ಎಂದು ಹೊಂದಿರುವ ಅರೆಭಾಷೆ ಗೌಡ ಸಮುದಾಯದವರು ಇದ್ದಲ್ಲಿ ಅವರುಗಳು ಜಾತಿ ಒಕ್ಕಲಿಗ ಉಪಜಾತಿ ಅರೆಭಾಷೆ ಗೌಡ ಮತ್ತು ಮಾತೃಭಾಷೆ ಅರೆ ಭಾಷೆ ಎಂದು ನಮೂದಿಸಲು ಯಾವುದೇ ಅಭ್ಯಂತರ ಇರುವುದಿಲ್ಲ. ಉಪಜಾತಿಯಲ್ಲಿ ಅರೆ ಭಾಷೆಗೌಡ ಎಂಬುದನ್ನು ಪ್ರತ್ಯೇಕ ಕಾಲಂನಲ್ಲಿ ಸೇರಿಸಬೇಕೆಂದು ಕೊಡಗು ಗೌಡ ಸಮಾಜಗಳ ಒಕ್ಕೂಟ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಅದು ತಕ್ಷಣಕ್ಕೆ ಕಾರ್ಯಗತವಾಗದೇ ಇದ್ದರೂ ಇತರೆ ಎನ್ನುವ ಕಾಲಂನಲ್ಲಿ ಅರೆ ಭಾಷೆಗೌಡ ಎಂದು ಬರೆಸುವ ಅವಕಾಶವಿದೆ. ಹಾಗೆಯೇ ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸಲು ಅರೆಭಾಷೆ ಗೌಡರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net