

ಮಡಿಕೇರಿ:
ಈಗ ಪಠ್ಯದಲ್ಲಿ ಇರುವ 1857ರ ಮೊದಲ ಸ್ವಾತಂತ್ರ‍್ಯ ಹೋರಾಟಕ್ಕೂ ಮೊದಲೇ ಕೊಡಗಿನಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಶುರುವಾಗಿತ್ತು ಎಂದು ಮಾಜಿ ಸೇನಾಧಿಕಾರಿ ಮೇಜರ್ ಡಾ. ಕುಶ್ವಂತ್ ಕೋಳಿಬೈಲು ಹೇಳಿದರು. ನಗರದ ಸುದರ್ಶನ ವೃತ್ತದ ಬಳಿ ಇರುವ ಸ್ವಾತಂತ್ರ‍್ಯ ಹೋರಾಟಗಾರ ಹುತಾತ್ಮ ಗುಡ್ಡೆ ಮನೆ ಅಪ್ಪಯ್ಯ ಗೌಡ ಪ್ರತಿಮೆ ಬಳಿ ಕೊಡಗು ಗೌಡ ಸಮಾಜಗಳ ಒಕ್ಕೂಟ ಮತ್ತು ಅಂಗಸAಸ್ಥೆಗಳ ವತಿಯಿಂದ ಶುಕ್ರವಾರ ನಡೆದ 79 ನೇ ಸ್ವಾತಂತ್ರ‍್ಯೋತ್ಸವ ಆಚರಣೆ ಸಂದರ್ಭ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
1837ರಲ್ಲಿ ಗುಡ್ಡೆಮನೆ ಅಪ್ಪಯ್ಯ ಗೌಡ ಮತ್ತು ಕೆದಂಬಾಡಿ ರಾಮಯ್ಯ ಗೌಡ ನೇತೃತ್ವದ ಅಮರ ಸುಳ್ಯ ದಂಗೆ ಸ್ವಾತಂತ್ರ‍್ಯ ಹೋರಾಟಕ್ಕೆ ಅಡಿಪಾಯ ಹಾಕಿತ್ತು.
ಇಂತಹ ಹಿರಿಯರ ತ್ಯಾಗ ಬಲಿದಾನವನ್ನು ನಮ್ಮ ಇಂದಿನ ಪೀಳಿಗೆ ನೆನಪಿಸಿಕೊಳ್ಳಬೇಕು. ಅವರು ಹಾಕಿದ ಮಾರ್ಗದಲ್ಲಿ ನಡೆಯಬೇಕು ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್ ಮಾತನಾಡಿ, ಹಿರಿಯರ ಬಲಿದಾನದಿಂದ ಬಂದ ಸ್ವಾತಂತ್ರ‍್ಯವನ್ನು ಅನುಭವಿಸುತ್ತಿರುವ ಇಂದಿನ ಯುವ ಜನತೆ ಜವಾಬ್ದಾರಿಯಿಂದ ನಾಡು ಮತ್ತು ದೇಶ ಕಟ್ಟುವ ಕೆಲಸ ಮಾಡಬೇಕೆಂದು ಹೇಳಿದರು.
ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ನವೀನ್ ಅಂಬೆಕಲ್ಲು, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ವಿನೋದ್ ಮೂಡಗದ್ದೆ, ಕೊಡಗು ಗೌಡ ಸಮುದಾಯದ ಗಣ್ಯರು, ಕೊಡಗಿನ ಗೌಡ ಸಮಾಜಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕೊಡಗು ಗೌಡ ಮಹಿಳಾ ಒಕ್ಕೂಟಗಳು, ಮಾಜಿ ಸೈನಿಕರ ಸಂಘ, ಯುವ ಸಂಘಟನೆಗಳು ಸೇರಿದಂತೆ ಕೊಡಗಿನ ಎಲ್ಲೆಡೆಯಿಂದ ಆಗಮಿಸಿದ್ದ ಸಮುದಾಯ ಬಾಂಧವರು ಹಾಜರಿದ್ದರು.
ಧ್ವಜಾರೋಹಣದ ನಂತರ ಹುತಾತ್ಮ ಗುಡ್ಡೆಮನೆ ಅಪ್ಪಯ್ಯಗೌಡರ ಪ್ರತಿಮೆಗೆ ಪುಷ್ಟ ನಮನ ಸಲ್ಲಿಸಲಾಯಿತು. ಕೊಡಗು ಮತ್ತು ದಕ್ಷಿಣ ಕನ್ನಡ ಒಕ್ಕಲಿಗ ಮಹಿಳಾ ಒಕ್ಕೂಟ ಮತ್ತು ಕುಶಾಲನಗರ ಗೌಡ ಮಹಿಳಾ ತಂಡದವರು ದೇಶ ಭಕ್ತಿ ಗೀತೆ ಪ್ರಸ್ತುತಪಡಿಸಿದರು.