

ಮಡಿಕೇರಿ:
ಶಿಕ್ಷಣದಿಂದ ಸದೃಢ ಸಮಾಜ ನಿರ್ಮಿಸಲು ಸಾಧ್ಯವಿದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಹೇಳಿದರು. ಇಲ್ಲಿನ ಗೌಡ ಸಮಾಜ ಸಭಾಂಗಣದಲ್ಲಿ ಕೊಡಗು ಗೌಡ ವಿದ್ಯಾ ಸಂಘ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಭಾನುವಾರ ನಡೆದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣಕ್ಕೆ ಒತ್ತು ನೀಡುವ ಸಲುವಾಗಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಗೌಡ ವಿದ್ಯಾ ಸಂಘ ಮಾಡುತ್ತಿರುವ ಕೆಲಸ ಶ್ಲಾಘನೀಯ. ವಿದ್ಯಾ ಸಂಘ ನೂತನ ಕಟ್ಟಡ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಕೊಡಗಿನ ಗೌಡ ಜನಾಂಗದವರ ಪ್ರಯತ್ನದಿಂದ ಅರೆಭಾಷೆ ಅಕಾಡೆಮಿ ಸ್ಥಾಪನೆಯಾಗಿದ್ದು, ಅಕಾಡೆಮಿ ಮೂಲಕ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಗಡಿನಾಡ ಉತ್ಸವದ ಮೂಲಕ ಅರೆಭಾಷೆಯ ಸಂಸ್ಕೃತಿ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆ ತಲುಪಿಸುವ ಪ್ರಯತ್ನ ನಡೆಸಲಾಗುತ್ತಿದೆ. ಅರೆಭಾಷೆಯಲ್ಲಿ ಸಾಹಿತಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಬೇಕಾಗಿದೆ. ಇದರಿಂದ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಪಸರಿಸಲು ಅವಕಾಶ ದೊರೆಯುತ್ತದೆ ಎಂದರು.
ಸೋಮವಾರಪೇಟೆ ಸಾಂದೀಪನಿ ಶಾಲೆ ಅಧ್ಯಕ್ಷ ಮೂಡಗದ್ದೆ ದಾಮೋದರ ಮಾತನಾಡಿ, ಯುಪಿಎಸ್‌ಎಸ್‌ಸಿ, ಕೆಎಎಸ್ ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಒದಗಿಸುವ ಕೆಲಸ ವಿದ್ಯಾಸಂಘದಿAದ ನಡೆಯಬೇಕಾಗಿದೆ ಎಂದರು.
ಕೊಡಗು ಗೌಡ ಸಮಾಜ ಕಾರ್ಯದರ್ಶಿ ಕೋಳಿಮುಡಿಯನ ಅನಂತ ಕುಮಾರ್ ಮಾತನಾಡಿ, ಶಿಕ್ಷಣವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆರಂಭಗೊAಡು ಸಂಘ ಇಂದಿಗೂ ತನ್ನ ಮೂಲ ಉದ್ದೇಶದಿಂದಲೇ ಮುನ್ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ ಸಾಲದ ರೂಪದಲ್ಲಿ ಹಣ ನೀಡಿ ಉದ್ಯೋಗ ದೊರೆತ ಬಳಿಕ ಸಂದಾಯ ಮಾಡುವ ವ್ಯವಸ್ಥೆಯನ್ನು ಈ ಹಿಂದೆ ಕಲ್ಪಿಸಲಾಗಿತ್ತು. ಅನಂತರ ದಾನಿಗಳ ಸಹಕಾದಿಂದ ಹಣ ಕ್ರೋಢಿಕರಿಸಿ ಠೇವಣಿಯಿಟ್ಟು ವಿದ್ಯಾರ್ಥಿ ವೇತನ ನೀಡುತ್ತ ಬರಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಓದುವ ಹುಮ್ಮಸ್ಸು ಹೆಚ್ಚಾಗುತ್ತಿದೆ ಎಂದರು.
ನಿವೃತ್ತ ಮುಖ್ಯಶಿಕ್ಷಕ ಬಾರಿಯಂಡ ಜೋಯಪ್ಪ, ಕಾಫಿ ಮಂಡಳಿ ನಿವೃತ್ತ ಸಂಪರ್ಕಾಧಿಕಾರಿ ಬಾರಿಕೆ ಅಯ್ಯಪ್ಪ ಮಾತನಾಡಿದರು.
ಕೊಡಗು ಗೌಡ ವಿದ್ಯಾ ಸಂಘ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೊಡಗು ಗೌಡ ವಿದ್ಯಾಸಂಘ ಉಪಾಧ್ಯಕ್ಷ ಅಮೆ ಸೀತಾರಾಮ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಮಡಿಕೇರಿ ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ಸೂದನ ಈರಪ್ಪ, ಶಿಕ್ಷಕಿ ತಳೂರು ಮುತ್ತಮ್ಮ ರಾಜಗೋಪಾಲ್, ಪೇರಿಯನ ಪ್ರಣವಿ ಉದಯ, ಚೊಕ್ಕಾಡಿ ಅಪ್ಪಯ್ಯ, ಪುದಿಯನೆರವನ ರೇವತಿ ರಮೇಶ್, ಪೇರಿಯನ ಉದಯ್ ಮತ್ತಿತರರು ಇದ್ದರು.