ಸರ್ಕಾರಿ ಶಾಲೆಗೆ ಹೈಟೆಕ್ ಸ್ಪರ್ಶ ; ಯಲ್ಕೂರು ಕ್ಲಸ್ಟರ್ ಸರ್ಕಾರಿ ಶಾಲೆಯಲ್ಲಿ ವಿಭಿನ್ನ ಪ್ರಯತ್ನ

25 MDG 01 Photo
Published on

ಮಧುಗಿರಿ: ತಾಲೂಕಿನ ಏಕೋಪಾಧ್ಯಾಯ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ವಿಭಿನ್ನ ಆಲೋಚನೆ ಮೂಲಕ

ಕರೊನಾ ಸಂಕಷ್ಟದಲ್ಲೂ ಮಕ್ಕಳನ್ನು ಶಾಲೆ ಕಡೆ ಮುಖ ಮಾಡುವಂತೆ ಮಾಡಿದ್ದಾರೆ.

ಐ.ಡಿ.ಹಳ್ಳಿ ಹೋಬಳಿಯ ಯಲ್ಕೂರು ಕ್ಲಸ್ಟರ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಏಕೋಪಾಧ್ಯಾಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ವಿ.ಗಂಗಾ, ‘ನಮ್ಮ ಶಾಲೆ ನಮ್ಮ ಕನಸು’ ಎಂಬ ಧ್ಯೇಯದೊಂದಿಗೆ ಶಾಲೆಗಳ ಗೋಡೆಗಳನ್ನು ವಿನೂತನವಾಗಿ ಕಂಗೊಳಿಸುವಂತೆ ಮಾಡಿದ್ದಾರೆ.

ಕಾರ್ಟೂನ್, ವರ್ಣಮಾಲೆ ಚಿತ್ತಾರ: ಗ್ರಾಮದಲ್ಲಿ ಸುಮಾರು 40 ಕುಟುಂಬಗಳಿದ್ದು, ಶಾಲೆಯಲ್ಲಿ 1 ರಿಂದ 5ನೇ ತರಗತಿವರೆಗೂ ವ್ಯಾಸಂಗ ಮಾಡಲು ಅವಕಾಶವಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ 11 ವಿದ್ಯಾರ್ಥಿಗಳು ವಿದ್ಯಾಗಮದ ಅಡಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಯ ಗೋಡೆಗಳಲ್ಲಿ ವಿಷಯವಾರು ಮಾಹಿತಿ ಜತೆಗೆ ಪ್ರತಿ ಅಕ್ಷರಕ್ಕೂ ಅರ್ಥ ರಚಿಸಲಾಗಿದೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಆಂಗ್ಲ ಭಾಷೆಯ ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಇಂಗ್ಲಿಷ್ ಕಲಿಕೆ ಸರಳಗೊಳಿಸಿದ್ದು, ಶಾಲೆಗೆ ಭೇಟಿ ನೀಡಿದರೆ ಯಾವುದೋ ಖಾಸಗಿ ಶಾಲೆಗೆ ಭೇಟಿ ನೀಡಿದಂತೆ ಭಾಸವಾಗುತ್ತದೆ. ಇಲ್ಲಿನ ಗೋಡೆಗಳಲ್ಲಿ ರಚಿಸಿರುವ ಆಂಗ್ಲ ಭಾಷೆಯ ಪ್ರತಿ ಪದಕ್ಕೂ ಕನ್ನಡದಲ್ಲಿ ಅನುವಾದ ಮಾಡಿ ಅರ್ಥ ಬರೆಯುವುದರ ಜತೆಗೆ ಕಣ್ಮನ ಸೆಳೆಯುವ ಕಾರ್ಟೂನ್‌ಗಳನ್ನು ರಚಿಸಿದ್ದಾರೆ. ಸಿ.ಆರ್.ಪಿ ಜಗದೀಶ್, ದಾನಿಗಳ ಸಹಕಾರದಿಂದ ಹಾಗೂ ಸರ್ಕಾರದ ಅನುದಾನ ಬಳಸಿಕೊಂಡು ಶಾಲೆಯ ಸಂಪೂರ್ಣ ಚಿತ್ರಣವನ್ನೇ ಬದಲಿಸಿದ್ದು, ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ಶಾಲೆಯ ಶಿಕ್ಷಕರು ಶಾಲೆಗಳ ಏಳಿಗೆಗೆ ವಿನೂತನ ರೀತಿಯಲ್ಲಿ ಚಿಂತಿಸುತ್ತಿರುವುದು ಹೆಮ್ಮೆಯೆನಿಸುತ್ತಿದೆ. ಯಲ್ಕೂರು ಕ್ಲಸ್ಟರ್ ಸರ್ಕಾರಿ ಶಾಲೆಯ ಶಿಕ್ಷಕಿ ಪಿ.ವಿ.ಗಂಗಾ ಶಾಲೆಯ ಗೋಡೆಗಳಿಗೆ ಹೈಟೆಕ್ ಸ್ಪರ್ಶ ನೀಡಿದ್ದು, ಬಣ್ಣದ ಚಿತ್ತಾರದ ಜತೆಗೆ ಮಕ್ಕಳನ್ನು ಕಲಿಕೆಯತ್ತ ಸೆಳೆಯಲು ವರ್ಣಮಾಲೆಯ ಸಂಪೂರ್ಣ ಭಂಡಾರವನ್ನೇ ಗೋಡೆಗಳಲ್ಲಿ ತುಂಬಿದ್ದಾರೆ. ಅವರಿಗೆ ಶಿಕ್ಷಣ ಇಲಾಖೆ ಪರವಾಗಿ ಧನ್ಯವಾದ. ರೇವಣಸಿದ್ದಪ್ಪ ಡಿಡಿಪಿಐ ಮಧುಗಿರಿ ಶೈಕ್ಷಣಿಕ ಜಿಲ್ಲೆ ಶಿಕ್ಷಕಿ ಗಂಗಾ ಶಾಲೆಗೆ ಬಂದ ನಂತರ ಶಾಲೆಯ ಚಿತ್ರಣವನ್ನೇ ಬದಲಿಸಿದ್ದು, ಮಕ್ಕಳ ಕಲಿಕೆಯ ದೃಷ್ಟಿಯಿಂದ ಹಲವಾರು ಬದಲಾವಣೆ ತಂದಿದ್ದಾರೆ. ಇದರಿಂದ ಮಕ್ಕಳ ಕಲಿಕೆಯಲ್ಲಿ ಬಹಳಷ್ಟು ಸುಧಾರಣೆ ಕಂಡು ಬಂದಿದ್ದು, ಇವರ ಪ್ರಯತ್ನಕ್ಕೆ ನಮ್ಮ ಸಹಕಾರವಿದೆ. ಸದಾಶಿವಯ್ಯ ಎಸ್‌ಡಿಎಂಸಿ ಅಧ್ಯಕ್ಷ ಖಾಸಗಿ ಶಾಲೆಗಳನ್ನು ಸಿಂಗರಿಸಿರುವುದನ್ನು ನೋಡಿದಾಗ ಸರ್ಕಾರಿ ಶಾಲೆ ಮಕ್ಕಳೂ ಇಂತಹ ವಾತಾವರಣದಲ್ಲಿ ಕಲಿಯುವಂತಾಗಬೇಕೆಂಬ ಉದ್ದೇಶದಿಂದ ಶಾಲೆಯ ಗೋಡೆಗಳಿಗೆ ಬಣ್ಣದ ಚಿತ್ತಾರ ಮೂಡಿಸಲಾಯಿತು. ವಿ.ಪಿ.ಗಂಗಾ ಶಿಕ್ಷಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net