ವರ್ಗವಾದವರಿಗೆ ವೇತನ ಸರ್ಕಾರ ಮಾಹಿತಿ; ಕೆಪಿಎಸ್​ಸಿ ಅಕ್ರಮ ನೇಮಕಾತಿ ಹಗರಣ

High Court 13 Jan 20
Published on

ಬೆಂಗಳೂರು: 1998ನೇ ಸಾಲಿನ ಕೆಪಿಎಸ್​ಸಿ ಅಕ್ರಮ ನೇಮಕಾತಿ ಹಗರಣ ಸಂಬಂಧ ಹೈಕೋರ್ಟ್ ವಿಭಾಗೀಯ ನೀಡಿರುವ ತೀರ್ಪಿನ ಅನುಸಾರ ಅಂತರ್ ಇಲಾಖೆಗೆ ವರ್ಗಾವಣೆಗೊಂಡವರಿಗೆ ವೇತನ ಬಿಡುಗಡೆ ಮಾಡಲಾಗಿದೆ ಎಂದು ಹೈಕೋರ್ಟ್​ಗೆ ಸರ್ಕಾರ ಮಾಹಿತಿ ನೀಡಿದೆ.

2016ರ ಜೂ.21ರಂದು ಹೈಕೋರ್ಟ್ ವಿಭಾಗೀಯ ಪೀಠ ನೀಡಿರುವ ತೀರ್ಪು ಜಾರಿ ಕೋರಿ ಸಲ್ಲಿಕೆಯಾಗಿರುವ ಮಧ್ಯಂತರ ಅರ್ಜಿಗಳನ್ನು ನ್ಯಾ. ರವಿ ಮಳಿಮಠ್ ಮತ್ತು ನ್ಯಾ. ವೀರಪ್ಪ ಅವರಿದ್ದ ವಿಶೇಷ ಪೀಠ ಬುಧವಾರ ವಿಚಾರಣೆ ನಡೆಸಿತು.

ಅರ್ಜಿಯನ್ನು ಫೆ.7ರಂದು ವಿಚಾರಣೆ ನಡೆಸಿದ್ದ ಪೀಠ, ಅಂತರ್ ಇಲಾಖೆಗೆ ವರ್ಗಾವಣೆಗೊಂಡವರಿಗೆ ವೇತನ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ವಿರುದ್ಧ ಏಕೆ ನ್ಯಾಯಾಂಗ ನಿಂದನೆ ಆರೋಪ ದಾಖಲಿಸಬಾರದು ಎಂದು ವಿವರಣೆ ಕೇಳಿ ನೋಟಿಸ್ ಜಾರಿಗೊಳಿಸಿತ್ತು. ಅಂತರ್ ಇಲಾಖೆ ವರ್ಗಾವಣೆಗೊಂಡಿದ್ದ ಎಲ್ಲ ಅಧಿಕಾರಿಗಳ ಬ್ಯಾಂಕ್ ಖಾತೆಗೆ ವೇತನ ವರ್ಗಾವಣೆ ಮಾಡಲಾಗಿದೆ ಎಂದು ಬುಧವಾರ ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ತಿಳಿಸಿದರು.

ಆ ಕುರಿತು ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಕಾರ್ಯದರ್ಶಿ ನೀಡಿರುವ ಪ್ರಮಾಣಪತ್ರದ ಪ್ರತಿ ಸಲ್ಲಿಸಿದರು. ಇದಕ್ಕೆ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರು, ಅರ್ಜಿ ದಾರರಿಗೆ ವೇತನ ನಿಗದಿ ಆಗಿಲ್ಲ. ಸೇವಾ ಹಿರಿತನ ನೀಡಿಲ್ಲ ಎಂದರು. ಪ್ರಕರಣ ಸಂಬಂಧ ಕೆಲವರು ಕೆಎಟಿ ಮೆಟ್ಟಿಲೇರಿದ್ದಾರೆ. ಆದ್ದರಿಂದ ವೇತನ ನಿಗದಿ ಮತ್ತು ಸೇವಾ ಹಿರಿತನ ಕೊಡಲಾಗುತ್ತಿಲ್ಲ. ಕಾನೂನು ಪ್ರಕಾರ ಅವರಿಗೆ ಎಲ್ಲ ಸವಲತ್ತುಗಳನ್ನು ಕ್ರಮೇಣ ನೀಡಲಾಗುವುದು ಎಂದು ಎಎಜಿ ತಿಳಿಸಿದರು. ಕಳೆದ ವಾರ ಜಾರಿ ಮಾಡಿರುವ ನ್ಯಾಯಾಂಗ ನಿಂದನೆ ಶೋಕಾಸ್ ನೋಟಿಸ್ ಸದ್ಯಕ್ಕೆ ಹಿಂಪಡೆಯುವುದಿಲ್ಲ. ಈ ವಿಚಾರದಲ್ಲಿ ಸಲ್ಲಿಕೆಯಾಗಿರುವ ಎಲ್ಲ ಮಧ್ಯಂತರ ಅರ್ಜಿಗಳನ್ನು ಒಟ್ಟಾಗಿ ವಿಚಾರಣೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದ ನ್ಯಾಯಪೀಠ, ವಿಚಾರಣೆಯನ್ನು ಮಾ.27ಕ್ಕೆ ಮುಂದೂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net