ಜನಹಿತ ಕಾಯುವ ಗ್ಯಾರಂಟಿ ಸರ್ಕಾರ: ಮಧು ಬಂಗಾರಪ್ಪ

congress Guarantee office
ಶಿವಮೊಗ್ಗ ಜಿಪಂ ಆವರಣದ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಲ್ ಅವರನ್ನು ಸಚಿವ ಮಧು ಬಂಗಾರಪ್ಪ ಸನ್ಮಾನಿಸಿದರು. ಸೂರಜ್ ಎಂ.ಎನ್. ಹೆಗಡೆ, ಬಲ್ಕಿಷ್ ಬಾನು, ಎಸ್.ರವಿಕುಮಾರ್, ಎನ್.ರಮೇಶ್, ಎಚ್.ಸಿ.ಯೋಗೇಶ್, ಎನ್.ಹೇಮಂತ್ ಇದ್ದರು.
Published on

ಶಿವಮೊಗ್ಗ: ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಸರ್ಕಾರಿ ನೌಕರರ ಏಳನೇ ವೇತನ ಆಯೋಗದ ವರದಿ ಹಾಗೂ ಐದು ಗ್ಯಾರಂಟಿ ಯೋಜನೆಗಳನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸಿ ನುಡಿದಂತೆ ನಡೆದಿದ್ದೇವೆ. ರಾಜ್ಯದ ಜನಸಾಮಾನ್ಯರ ಹಿತ ಕಾಯುವಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಜಿಲ್ಲಾ ಪಂಚಾಯಿತಿ ಕಟ್ಟಡದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಕಚೇರಿ ಉದ್ಘಾಟನೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಅತಿ ಹೆಚ್ಚಿನ ಜನರು ಯೋಜನೆಗಳ ಲಾಭ ಪಡೆದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇಂತಹ ಜನಪರ ಯೋಜನೆಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಿದ ದೇಶದ ಮೊದಲ ರಾಜ್ಯ ಕರ್ನಾಟಕ ಎಂದು ತಿಳಿಸಿದರು.
ಅನೇಕ ಸಮಸ್ಯೆ-ಸವಾಲುಗಳ ನಡುವೆಯೂ ಸರ್ಕಾರ ಜನರ ಅಹವಾಲುಗಳಿಗೆ ಕಿವಿಯಾಗಿದ್ದು, ಜನಸಾಮಾನ್ಯರ ನೆರವಿಗೆ ಧಾವಿಸಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಿಪಕ್ಷದವರು ಹಗುರವಾಗಿ ಮಾತನಾಡುತ್ತಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೊಟ್ಟ ಮಾತು ಉಳಿಸಿಕೊಂಡಿದೆ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕವನ್ನು ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್ ಅವರಿಗೆ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು. ಪ್ರಾಧಿಕಾರದ ಉಪಾಧ್ಯಕ್ಷ ಸೂರಜ್ ಎಂ.ಎನ್. ಹೆಗಡೆ, ಎಂಎಲ್‌ಸಿ ಬಲ್ಕಿಷ್ ಬಾನು, ಜಿಪಂ ಸಿಇಒ ಎನ್.ಹೇಮಂತ್, ಮುಖಂಡರಾದ ಎಸ್.ರವಿಕುಮಾರ್, ಎನ್.ರಮೇಶ್, ಎಚ್.ಸಿ.ಯೋಗೇಶ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net