ಮತ್ತೆ ಸ್ಥಳೀಯ ಸಂಸ್ಥೆಗಳಿಗೆ ಗ್ರಹಣ: ಸೋಮವಾರ ಮೇಲ್ಮನವಿ ಸಲ್ಲಿಸಲಿರುವ ಸರ್ಕಾರ

CMC Office Building. Tiptur.
Published on

ತಿಪಟೂರು: ನಗರಸಭೆ, ಪುರಸಭೆ, ಪಟ್ಟಣಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪಟ್ಟಿ ಕುರಿತಂತೆ ಗುರುವಾರದ ಹೈಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತಕ್ಕೆ ಮತ್ತೆ ಗ್ರಹಣ ಬಡಿದಂತಾಗಿದೆ.

ಚುನಾವಣೆ ನಡೆದು ಒಂದೂವರೆ ವರ್ಷದ ಬಳಿಕ ಅಸ್ತಿತ್ವಕ್ಕೆ ಬಂದಿದ್ದ ಸ್ಥಳೀಯ ಆಡಳಿತಕ್ಕೆ ಈಗ ಮತ್ತೆ ನ್ಯಾಯಾಲಯ ಬ್ರೇಕ್ ಹಾಕಿದೆ. ಜಿಲ್ಲೆಯಲ್ಲಿ ತಿಪಟೂರು ನಗರಸಭೆ, ಮಧುಗಿರಿ, ಪಾವಗಡ, ಕುಣಿಗಲ್ ಹಾಗೂ ಚಿಕ್ಕನಾಯಕನಹಳ್ಳಿ ಪುರಸಭೆ, ಕೊರಟಗೆರೆ, ಗುಬ್ಬಿ, ತುರುವೇಕೆರೆ ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನಿಗದಿಪಡಿಸಿ ಅ.8ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯಂತೆ ಈಗಾಗಲೇ ಎಲ್ಲ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಸುಸೂತ್ರವಾಗಿ ನಡೆದಿತ್ತು. ಅಧಿಕಾರ ಗದ್ದುಗೆ ಏರಿ ಇನ್ನೂ 15 ದಿನಗಳಾಗಿರಲಿಲ್ಲ, ಅಷ್ಟರಲ್ಲಾಗಲ್ಲೇ ಹೊರಬಿದ್ದಿರುವ ಹೈಕೋರ್ಟ್ ತೀರ್ಪು ಅಧ್ಯಕ್ಷ, ಉಪಾಧ್ಯಕ್ಷರ ಕನಸಿಗೆ ಕೊಳ್ಳಿಯಿಟ್ಟಿದೆ.

ಅಧ್ಯಕ್ಷ ಗಿರಿಗೆ ರೆಸಾರ್ಟ್ ಯಾತ್ರೆ: ಸ್ಥಳೀಯ ಸಂಸ್ಥೆಗಳ ಆಡಳಿತ ಚುಕ್ಕಾಣಿ ಹಿಡಿಯಲು ಕೆಲವರು ಲಕ್ಷಾಂತರ ರೂ. ಬಂಡವಾಳ ಹೂಡಿದ್ದರಲ್ಲದೆ, ಸದಸ್ಯರನ್ನು ರೆಸಾರ್ಟ್ ಯಾತ್ರೆಗೆ ಕೂಡ ಕರೆದೊಯ್ಯಿದಿದ್ದರು. ಹೈಕೋರ್ಟ್ ತೀರ್ಪಿನಿಂದಾಗಿ ಈಗ ಅಧ್ಯಕ್ಷ, ಉಪಾಧ್ಯಕ್ಷರು ಅಕ್ಷರಶಃ ಗರಬಡಿದಂತಾಗಿದ್ದಾರೆ. 10 ದಿನದೊಳಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದು ವಿಭಾಗೀಯ ಪೀಠದ ಆದೇಶದ ಮೇಲೆ ಅಧ್ಯಕ್ಷ, ಉಪಾಧ್ಯಕ್ಷರ ಭವಿಷ್ಯ ನಿಂತಿದೆ.

ರಾಮಮೋಹನ್‌ಗೆ ಮತ್ತೆ ಅಗ್ನಿ ಪರೀಕ್ಷೆ !?: ತಿಪಟೂರು ನಗರಸಭೆ ಅಧ್ಯಕ್ಷ ಗದ್ದುಗೆ ಏರಿದ್ದ ಬಿಜೆಪಿಯ ರಾಮಮೋಹನ್ ಕಳೆದ ಬಾರಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೇವಲ ಒಂದು ಮತದ ಅಂತರದಿಂದ ಪರಾಭವಗೊಂಡು ಅಧ್ಯಕ್ಷ ಸ್ಥಾನದಿಂದ ವಂಚಿತರಾಗಿದ್ದರು. ಒಂದೂವರೆ ವರ್ಷದ ಹಿಂದೆ ನಗರಸಭೆಗೆ ಚುನಾವಣೆ ನಡೆದರೂ ಮೀಸಲಾತಿ ಗೊಂದಲದ ವಿಳಂಬದಿಂದ ಕಡೆಗೂ ಕಳೆದ ಅಕ್ಟೋಬರ್ 31ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲದೊಂದಿಗೆ ಅಧಿಕಾರ ಹಿಡಿದಿದ್ದರು. ರಾಮಮೋಹನ್ ಹಾಗೂ ಉಪಾಧ್ಯಕ್ಷ ಸೊಪ್ಪು ಗಣೇಶ್‌ಗೆ ನ್ಯಾಯಾಲಯದ ತೀರ್ಪು ಇದೀಗ ತೀವ್ರ ನಿರಾಸೆ ಉಂಟುಮಾಡಿದೆ.

ಅಡ್ವೋಕೇಟ್ ಜನರಲ್ ಬಳಿ ಈ ಕುರಿತು ಚರ್ಚಿಸಿದ್ದೇನೆ. ಸೋಮವಾರ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಲಿದೆ. ನ್ಯಾಯಾಲಯದ ನಿರ್ದೇಶನದಂತೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಸಲಾಗಿತ್ತು. ಜೆ.ಸಿ.ಮಾಧುಸ್ವಾಮಿ ಕಾನೂನು ಸಚಿವರು ನ್ಯಾಯಾಲಯದ ತೀರ್ಪಿನ ಬಗ್ಗೆ ಇನ್ನೂ ಕೂಲಂಕಷವಾಗಿ ತಿಳಿದುಕೊಂಡಿಲ್ಲ. ಸರ್ಕಾರದ ಅಧಿಕೃತ ಅದೇಶಕ್ಕೆ ಬದ್ಧ. ಪಿ.ಜೆ. ರಾಮಮೋಹನ್, ಅಧ್ಯಕ್ಷ, ತಿಪಟೂರು ನಗರಸಭೆ ಶೇ.50ಕ್ಕೂ ಅಧಿಕ ಪ್ರಕರಣಗಳಲ್ಲಿ ಯಾವುದೇ ಬದಲಾವಣೆ ಕಂಡು ಬರದಿದ್ದಲ್ಲಿ ನ್ಯಾಯಾಲಯ ಯಥಾ ಸ್ಥಿತಿ ಮುಂದುವರಿಸುವಂತೆ ಅದೇಶ ನೀಡುವ ವಿಶ್ವಾಸವಿದೆ. ಸೊಪ್ಪು ಗಣೇಶ್, ಉಪಾಧ್ಯಕ್ಷ, ತಿಪಟೂರು ನಗರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net