ಅನುಗ್ರಹ ಕೊಡುಗೆಗೆ ಸರ್ಕಾರದಿಂದ ಬ್ರೇಕ್

SHEEP 1
Published on

ತುಮಕೂರು: ಕುರಿ, ಮೇಕೆಗಳು ಆಕಸ್ಮಿಕವಾಗಿ ಮೃತಪಟ್ಟ ಸಂದರ್ಭದಲ್ಲಿ ಕುರಿಗಾಹಿಗಳಿಗೆ ನೆರವಾಗಲು ನೀಡುತ್ತಿದ್ದ ಮಹತ್ವಾಕಾಂಕ್ಷಿ ಪರಿಹಾರಧನ ಕಾರ್ಯಕ್ರಮ 'ಅನುಗ್ರಹ ಕೊಡುಗೆ'ಗೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ.

ಬಜೆಟ್‌ನಲ್ಲಿ ಹಣ ಮೀಸಲಿಡದ ಹಿನ್ನೆಲೆಯಲ್ಲಿ ಕುರಿಗಾಹಿಗಳಿಂದ ಹೊಸ ಅರ್ಜಿಗಳನ್ನು ಪಡೆಯಬಾರದು ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಆಯುಕ್ತರು ಏ.15ರಂದು ಸುತ್ತೋಲೆ ಹೊರಡಿಸಿದ್ದು, ಕುರಿಗಾಹಿಗಳ ಪಾಲಿಗೆ ಮರಣ ಶಾಸನವಾಗಲಿದೆ.

2020-21ನೇ ಸಾಲಿನ ಆಯವ್ಯಯದ ಅನುಗ್ರಹ ಕೊಡುಗೆ (ಎಕ್ಸ್-ಗ್ರೇಶಿಯಾ) ಲೆಕ್ಕ ಶೀರ್ಷಿಕೆ ಅಡಿಯಲ್ಲಿ ಅನುದಾನ ನಿಗದಿಯಾಗದಿರುವ ಹಿನ್ನೆಲೆಯಲ್ಲಿ ಕುರಿಗಾಹಿಗಳಿಂದ ಅರ್ಜಿ ಸ್ವೀಕರಿಸದಿರುವುದು ಸೂಕ್ತ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕುರಿ/ಮೇಕೆ ಆಕಸ್ಮಿಕ ಮರಣ ಹೊಂದಿದಲ್ಲಿ ಹಾಗೂ ದೃಢೀಕೃತ ಸಾಂಕ್ರಾಮಿಕ ರೋಗಕ್ಕೆ ಮೃತಪಟ್ಟ ಪ್ರಕರಣದಲ್ಲಿ ವಿಮೆಗೆ ಒಳಪಡದ 6 ತಿಂಗಳು ಮೇಲ್ಪಟ್ಟ ಕುರಿ/ಮೇಕೆಗೆ 5000 ರೂ., ಹಾಗೂ ಆರು ತಿಂಗಳ ಒಳಗಿನ ಮರಿಗೆ 2500ರೂ. ಸಹಾಯಧನ ನೀಡಲಾಗುತ್ತಿತ್ತು. ಜಿಲ್ಲೆಯಲ್ಲಿ 17 ಲಕ್ಷ ಕುರಿ, ಮೇಕೆಗಳನ್ನು ಸಾಕಣೆ ಮಾಡಲಾಗುತ್ತಿದೆ. 10 ಸಾವಿರಕ್ಕೂ ಹೆಚ್ಚು ಕುಟುಂಬಗಳ ಪ್ರಮುಖ ಕಸುಬು ಕೂಡ ಇದೇ ಆಗಿದೆ. ಚಿತ್ರದುರ್ಗ, ಮೈಸೂರು, ಕೊಪ್ಪಳ, ಬೆಂ.ಗ್ರಾಮಾಂತರ, ಬಳ್ಳಾರಿ ಸೇರಿ ವಿವಿಧ ಜಿಲ್ಲೆಗಳ ಕುರಿಗಾಯಿಗಳು ಈ ಯೋಜನೆಯ ಲಾಭ ಪಡೆದಿದ್ದರು.

ಜಿಲ್ಲೆಯಲ್ಲಿ 12 ಲಕ್ಷ ಕುರಿ, 6 ಲಕ್ಷ ಮೇಕೆ ಸಾಕಾಣಿಕೆ ಇದೆ, ಕಳೆದ ವರ್ಷ ಅರ್ಜಿ ಸಲ್ಲಿಸಿರುವ ಕುರಿಗಾಹಿಗಳಿಗೆ 2.5ಕೋಟಿ ರೂ. ಬಾಕಿಯಿದೆ. ಪ್ರಸಕ್ತ ವರ್ಷ ಹೊಸ ಅರ್ಜಿ ತೆಗೆದುಕೊಳ್ಳಬಾರದು ಎಂದು ಸೂಚಿಸಿರುವುದರಿಂದ ಮುಂದಿನ ಆದೇಶದವರೆಗೂ ಕಾಯಬೇಕು. ಡಾ.ನಾಗಣ್ಣ ಸಹಾಯಕ ನಿರ್ದೇಶಕ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಕೃಷಿಗೆ ಪೂರಕ ಉದ್ಯೋಗವಾಗಿ ಕುರಿ, ಮೇಕೆ ಸಾಕಾಣಿಕೆಯಲ್ಲಿರುವ ಎಲ್ಲರೂ ಬಡವ, ಹಿಂದುಳಿದ ಕುಟುಂಬದವರೇ ಆಗಿದ್ದು ಆಕಸ್ಮಿಕವಾಗಿ ಸಾವನ್ನಪ್ಪುವ ಕುರಿ, ಮೇಕೆಗೆ ನೀಡುತ್ತಿದ್ದ ಧನಸಹಾಯ ನಿಲ್ಲಿಸಿರುವುದು ಸರಿಯಲ್ಲ, ಕೂಡಲೇ ಸರ್ಕಾರ ಅರ್ಜಿ ಸ್ವೀಕರಿಸಬೇಕು ಹಾಗೂ ಬಾಕಿ ಇರುವ ಪರಿಹಾರ ವಿತರಿಸಬೇಕು. ಡಾ.ಸತೀಶ್ , ಸಾಸಲು, ಕಾಂಗ್ರೆಸ್ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net