

| ಗೋಪಾಲಕೃಷ್ಣ ಪಾದೂರು, ಉಡುಪಿ
ಉದ್ಯೋಗಸ್ಥ ಮಹಿಳೆಯರ ಅನುಕೂಲಕ್ಕಾಗಿ ಜಿಲ್ಲಾ ಕೇಂದ್ರದಲ್ಲಿ 2, ಕಾರ್ಕಳ ಮತ್ತು ಕುಂದಾಪುರದಲ್ಲಿ ತಲಾ 1 ಶಿಶುಪಾಲನಾ ಕೇಂದ್ರ ಕಾರ್ಯಾರಂಭಗೊಂಡಿದ್ದು, ‘ಡೇ ಕೇರ್’ ಮಾದರಿಯಲ್ಲಿ ಮಕ್ಕಳ ಪಾಲನೆ ಹಾಗೂ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಲಾಗಿದೆ.
6 ತಿಂಗಳಿನಿಂದ 6 ವರ್ಷ ವಯಸ್ಸಿನವರೆಗಿನ ಮಕ್ಕಳು ಈ ಶಿಶುಪಾಲನಾ ಕೇಂದ್ರಕ್ಕೆ ದಾಖಲಾಗಬಹುದು. ದುಡಿಯುವ ವರ್ಗದ ಮಹಿಳೆಯರಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಯೋಜನೆ ರೂಪಿಸಲಾಗಿದ್ದು, ಬೆಳಿಗ್ಗೆ 9.30ರಿಂದ ಸಾಯಂಕಾಲ 6 ಗಂಟೆಯವರೆಗೆ ಶಿಶುಪಾಲನಾ ಕೇಂದ್ರದಲ್ಲಿ ಮಕ್ಕಳನ್ನು ನೋಡಿಕೊಳ್ಳುವ ವ್ಯವಸ್ಥೆಯಿದೆ. ಪ್ರತಿ ಶಿಶುಪಾಲನಾ ಕೇಂದ್ರದಲ್ಲಿ ಶಿಕ್ಷಕಿ ಹಾಗೂ ಸಹಾಯಕಿ ಕಾರ್ಯನಿರ್ವಹಿಸುತ್ತಿದ್ದು, ಮಕ್ಕಳ ಆರೈಕೆ, ಆಟ, ಊಟ ಹಾಗೂ ಕಲಿಕೆ ಒಂದೆಡೆ ಸಿಗುವುದರಿಂದ ಉದ್ಯೋಗಸ್ಥ ಮಹಿಳೆಯರು ನಿಶ್ಚಿಂತೆಯಿಂದ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು.
*ಎಲ್ಲಿದೆ?: ಜಿಲ್ಲಾಮಟ್ಟದ ಶಿಶುಪಾಲನಾ ಕೇಂದ್ರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿದ್ದು, ಇನ್ನೊಂದು ಉಡುಪಿ ನಗರಸಭೆ ಹತ್ತಿರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರಂಭಗೊಂಡಿದೆ. ಕುಂದಾಪುರದಲ್ಲಿ ತಲ್ಲೂರು ಹಳೇ ಅಂಚೆ ಕಚೇರಿ ಹತ್ತಿರ ಹಾಗೂ ಕಾರ್ಕಳದಲ್ಲಿ ತಾಲೂಕು ಮಹಿಳಾ ಮಂಡಳಗಳ ಒಕ್ಕೂಟ ಕಚೇರಿಯಲ್ಲಿ ತಾಲೂಕು ಮಟ್ಟದ 2 ಶಿಶುಪಾಲನಾ ಕೇಂದ್ರಗಳಿವೆ.
2021ರಲ್ಲಿ ಸರ್ಕಾರಿ ನೌಕರರ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಶಿಶುಪಾಲನಾ ಕೇಂದ್ರ ಯೋಜನೆ ರೂಪಿಸಲಾಯಿತು. ಇದಕ್ಕಾಗಿ ಸರ್ಕಾರಿ ನೌಕರರು ಹೆಚ್ಚಾಗಿರುವ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು. ಸರ್ಕಾರ ಕಳೆದ ವರ್ಷ ಬಜೆಟ್‌ನಲ್ಲಿ ಖಾಸಗಿ ಕಂಪನಿ ಸಿಬ್ಬಂದಿ ಹಾಗೂ ದುಡಿಯುವ ಮಹಿಳೆಯರ ಮಕ್ಕಳಿಗೂ ಅವಕಾಶ ಕಲ್ಪಿಸಲಾಗಿತ್ತು.
ದುಡಿಯುವ ಮಹಿಳೆಯರು ಜಿಲ್ಲೆಯ 4 ಶಿಶುಪಾಲನಾ ಕೇಂದ್ರಗಳ ಸೌಲಭ್ಯ ಪಡೆಯಬಹುದು. ಇತ್ತೀಚೆಗೆ ಕೇಂದ್ರಗಳು ಪ್ರಾರಂಭವಾಗಿದ್ದು, ಮಕ್ಕಳ ದಾಖಲಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮಕ್ಕಳಿಗೆ ಪೌಷ್ಟಿಕ ಆಹಾರಗಳನ್ನು ಇಲಾಖಾ ನಿಯಮಾನುಸಾರ ಒದಗಿಸಲು ಕ್ರಮ ವಹಿಸಲಾಗುತ್ತಿದೆ.| ವೀಣಾ ವಿವೇಕಾನಂದ, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಉಡುಪಿ