ಸರ್ಕಾರ ಎನ್‌ಪಿಎಸ್ ನೌಕರರ ಹಿತ ಕಾಯಲಿ

24 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಚುನಾವಣೆ ವೇಳೆ ಎನ್‌ಪಿಎಸ್ ತೆಗೆದು ಒಪಿಎಸ್ ಜಾರಿ ಮಾಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿತ್ತು. ಈಗ ನುಡಿದಂತೆ ನಡೆದು ರಾಜ್ಯದ ಲಕ್ಷಾಂತರ ಎನ್‌ಪಿಎಸ್ ನೌಕರರ ಕುಟುಂಬಕ್ಕೆ ಭದ್ರತೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಒತ್ತಾಯಿಸಿದರು.
ನಗರದ ಮಿನಿವಿಧಾನಸೌಧದಲ್ಲಿನ ಜನ ಸಂಪರ್ಕ ಕಚೇರಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಮಾಣಿಕ ಸೇವೆಗೆ ಸಿಕ್ಕ ಅವಕಾಶವನ್ನು ಸಮಾಜ ಮುಖಿಯಾಗಿ ಬಳಸಿಕೊಂಡು ಉತ್ತಮ ಸೇವೆ ಸಲ್ಲಿಸಬೇಕು. ರಾಜ್ಯದ ಸರ್ಕಾರಿ ನೌಕರರ ಮತ್ತು ಶಿಕ್ಷಕರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಲೇ, ಎನ್‌ಪಿಎಸ್ ನೌಕರರ ಹಿತರಕ್ಷಣೆಗೆ ಸದಾ ಶ್ರಮಿಸುವುದಾಗಿ ಹೇಳಿದರು.
ಪ್ರಾಚಾರ್ಯ ಮೋಹನ ಸಿದ್ದಾಂತಿ, ಕಸಾಪ ಜಿಲ್ಲಾಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಮಲ್ಲಿಕಾರ್ಜುನ ಚಿಕ್ಕಮಠ, ಅಮಿತ ಪಾಟೀಲ, ಸುರೇಶ ಮುಗಳಿ ಮಾತನಾಡಿದರು.
ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ಸುರೇಶ ಮುಗಳಿ, ಬಾಗಲಕೋಟ ವಿಶ್ವವಿದ್ಯಾಲಯದ ಸಿಡಿಕೇಟ್ ಸದಸ್ಯರಾಗಿ ಆಯ್ಕೆಯಾದ ವೀರಬಸನಗೌಡ ಪಾಟೀಲ(ಅಮಿತ ಪಾಟೀಲ) ಅವರನ್ನು ಸನ್ಮಾನಿಸಲಾಯಿತು.
ನಿವೃತ್ತ ಶಿಕ್ಷಕರಾದ ಎಂ.ಸಿ.ಸವಣೂರ, ಕೆ.ಎಚ್, ನಾಯಕ, ಎಂ.ಎಸ್. ಫರಾಸ್, ಎನ್‌ಪಿಎಸ್ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜು ಮಾಳವಾಡ, ಶಿಕ್ಷಕರು, ಇತರರು ಇದ್ದರು. ಎಸ್.ಎಲ್. ಶೇಖರಗೋಳ ನಿರೂಪಿಸಿದರು. ಡಾ.ಬಿ.ಆರ್. ರಾಠೋಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net