

ಜಗದೀಶ ಹೊಂಬಳಿ ಬೆಳಗಾವಿ
ನೌಕರಿ ಮಾಡುವುದಕ್ಕೆ ಅಂಧತ್ವ ಅಡ್ಡಿಯಲ್ಲ. ಮನಸ್ಸು ಮಾಡಿದರೆ ಅಂಧತ್ವವನ್ನು ಮೆಟ್ಟಿನಿಂತು ಸಾಮಾನ್ಯ ಜನರಂತೆ ಸೇವೆ ಸಲ್ಲಿಸಬಹುದು ಎಂಬುದಕ್ಕೆ ಇಲ್ಲೊಬ್ಬ ಅಂಧ ಯುವಕ ಸಾಕ್ಷಿಯಾಗಿದ್ದಾನೆ.
ಗೋಕಾಕ ಪಟ್ಟಣದ ಸುಮಿತ್ ಮೋಟೆಕರ ಎಂಬ ಅಂಧ ಯುವಕ ಮಹಾನಗರ ಪಾಲಿಕೆಯ ಆರೋಗ್ಯ ಶಾಖೆಯಲ್ಲಿ ದ್ವಿತೀಯ ದರ್ಜೆಯ ಸಹಾಯಕ (ಎಸ್‌ಡಿಎ)ರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅಂಧತ್ವ ಮೆಟ್ಟಿನಿಂತು ಸರ್ಕಾರಿ ಸೇವೆಯಲ್ಲಿ ತೊಡಗಿದ್ದಾರೆ. ಕಣ್ಣಿಲ್ಲದಿದ್ದರೂ ಕಚೇರಿಯ ಪತ್ರಗಳನ್ನು ಟೈಪ್ ಮಾಡುವುದು, ಕಚೇರಿಯ ಇತರೆ ಆನ್‌ಲೈನ್ ಅಪ್‌ಡೇಟ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದ್ದ ಸುಮಿತ್ ಅವರು, 2021ರಲ್ಲಿ ಎಸ್‌ಡಿಎ ಆಗಿ ನೇಮಕಗೊಂಡಿದ್ದಾರೆ. ಇದಕ್ಕೂ ಪೂರ್ವದಲ್ಲಿ ಬೆಂಗಳೂರಿನಲ್ಲಿ ‘ಕಂಪ್ಯೂಟರ್ ಇನ್ ಅಡ್ವಾನ್ಸ್ ಕೋರ್ಸ್’ ಕಲಿತಿದ್ದಾರೆ. ಈ ತರಬೇತಿಯಲ್ಲಿ ಕಂಪ್ಯೂಟರ್ ಆಪ್ಲಿಕೇಶನ್ ಬಗ್ಗೆ ತರಬೇತಿ ಪಡೆದಿದ್ದಾರೆ. ಎಕ್ಸ್‌ಎಲ್ ಅಡ್ವಾನ್ಸ್, ಎಂಎಸ್ ವಲ್ಡ್ ಅಡ್ವಾನ್ಸ್, ಇತರ ಅಪ್ಲಿಕೇಶನ್‌ಗಳ ಬಗ್ಗೆ ಆರು ತಿಂಗಳು ತರಬೇತಿ ಪಡೆದಿದ್ದಾರೆ. ಇದರ ಆಧಾರದಲ್ಲಿ ಕಚೇರಿ ಕೆಲಸವನ್ನು ಸರಾಗವಾಗಿ ನಿರ್ವಹಿಸುತ್ತಿದ್ದಾರೆ. ಸದ್ಯ ಕಚೇರಿಯಲ್ಲಿ ‘ನಾನ್ ಡೆಸ್ಕ್ ಟಾಪ್ ವಿಶುವಲ್ ಎಕ್ಸಲ್’ ಅಪ್ಲಿಕೇಶನ್ ಮೂಲಕ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಂಪ್ಯೂಟರ್ ಆನ್ ಮಾಡುವುದು, ಕಡತಗಳನ್ನು ತೆರೆಯುವುದು, ಯಾವ ಕಡತವನ್ನು ಎಡಿಟ್ ಮಾಡಬೇಕು ಎಂಬುವುದನ್ನು ಅಪ್ಲಿಕೇಶನ್ ಸಹಾಯದಿಂದ ಮಾಡುತ್ತಿದ್ದಾರೆ. ಅವರ ಮೊಬೈಲ್‌ಗೆ ಅಧಿಕಾರಿಗಳು ಕರೆ ಮಾಡಿದರೆ ಯಾವ ಅಧಿಕಾರಿಗಳು ಕರೆ ಮಾಡಿದ್ದಾರೆಂಬುದನ್ನು ತಿಳಿಯುವುದಕ್ಕೆ ‘ಮೊಬೈಲ್ ಟಾಕ್‌ಬ್ಯಾಕ್‘ ಅಪ್ಲಿಕೇಶನ್ ಅಳವಡಿಸಿಕೊಂಡಿದ್ದಾರೆ. ಈ ಆ್ಯಪ್ ಸಹಾಯದಿಂದ ಬಂದ ಕರೆಗಳನ್ನು ಬೇರೆಯವರ ಸಹಾಯವಿಲ್ಲದೆ ಸೇವ್ ಮಾಡಿಕೊಳ್ಳುತ್ತಾರೆ.
ಕೆಪಿಎಸ್‌ಸಿ ಮೂಲಕ ಅಂದು ನಡೆದಿದ್ದ ಎಸ್‌ಡಿಎ ಪರೀಕ್ಷೆಯಲ್ಲಿ ರಾಜ್ಯದಲ್ಲಿ 7 ಜನ ಅಂಧರು ಆಯ್ಕೆಯಾಗಿದ್ದರು. ಇದರಲ್ಲಿ ಸುಮಿತ್ ಮೋಟೆಕರ ಕೂಡ ಒಬ್ಬರು. ಅಂದು ಬೆಳಗಾವಿ ಜಿಲ್ಲೆಯಲ್ಲಿ ಎಸ್‌ಡಿಎ ಆಗಿ ಆಯ್ಕೆಯಾದ ಏಕೈಕ ಅಂಧ ವ್ಯಕ್ತಿ ಸುಮಿತ್ ಆಗಿದ್ದಾರೆ.
ಬಹುಮುಖ ಪ್ರತಿಭೆ:
ಎಸ್‌ಡಿಎ ಆಗುವ ಮುನ್ನ ಸುಮಿತ್ ಅವರು ಹೈದ್ರಾಬಾದ್ ಹಾಗೂ ದೆಹಲಿಯಲ್ಲಿ ಹಿಂದೂಸ್ತಾನ್ ಕಂಪ್ಯೂಟರ್ ಸೆಂಟರ್ ಲಿಮಿಟೆಡ್‌ನಲ್ಲಿ ಅಸೋಸಿಯೇಟ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸಿದ್ದಾರೆ. ಎರಡು ವರ್ಷ ಮಾನವ ಸಂಪನ್ಮೂಲ (ಎಚ್‌ಆರ್‌ಎ) ವಿಭಾಗದಲ್ಲಿ ಕೆಲಸ ನಿರ್ವಹಿಸಿದ್ದಾರೆ. ರಾಷ್ಟ್ರಮಟ್ಟ ಮಟ್ಟದ ಅಂಧರ ಕ್ರೀಡಾಕೂಟದಲ್ಲಿ ಎರಡು ಬಾರಿ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಲಕ್ನೋದಲ್ಲಿ ಆಯೋಜಿಸಿದ್ದ ಅಂಧರ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಜುಡೋ (ಮಲ್ಲಯುದ್ಧ)ದಲ್ಲಿ ಕರ್ನಾಟಕ ಪ್ರತಿನಿಧಿಸಿದ್ದರು. ಲಲಿತ ಪ್ರಬಂಧ, ಪುಸ್ತಕ, ಕಾದಂಬರಿ ಬರೆಯುವ ಹವ್ಯಾಸ ಇಟ್ಟುಕೊಂಡಿದ್ದಾರೆ. ಲಲಿತ ಪ್ರಬಂಧ, ಪುಸ್ತಕ, ಕಾದಂಬರಿ ಬರೆದಿದ್ದಾರೆ. ಅವುಗಳನ್ನು ಪುಸ್ತಕ ರೂಪಕ್ಕೆ ತರುವುದಕ್ಕೆ ಪ್ರಯತ್ನಿಸುತ್ತಿದ್ದಾರೆ.
ಸುಮಿತ್ ಮೋಟೆಕರ ಪ್ರತಿಕ್ರಿಯೆ:
ಬೆಳಗಾವಿ ಆರ್‌ಪಿಡಿ ಕಾಲೇಜಿನಲ್ಲಿ ಪದವಿ ಪೂರೈಸಿದ್ದೇನೆ. ಬೆಳಗಾವಿ ಜಿಲ್ಲೆಯಲ್ಲಿ ನಾನು ಒಬ್ಬನೇ ಎಸ್‌ಡಿಎ ಆಗಿ ಆಯ್ಕೆಯಾಗಿದ್ದೆ. ಸದ್ಯ ಪಾಲಿಕೆಯಲ್ಲಿ ಎಸ್‌ಡಿಎ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ಸುಮಿತ್ ಮೋಟೆಕರ ತಿಳಿಸಿದರು.
ಆಯುಕ್ತರ ಪ್ರತಿಕ್ರಿಯೆ:
ಪಾಲಿಕೆಯಲ್ಲಿ ವಿಶೇಷ ಚೇತನ ವ್ಯಕ್ತಿಯೊಬ್ಬರು ಕಾರ್ಯ ನಿರ್ವಹಸುತ್ತಿರುವುದು ವಿಶೇಷವಾಗಿದೆ. ಅಂದ ಯುವಕ ಸುಮೀತ್ ಮೋಟೆಕರ ಅವರು ಇತರರಿಗೆ ಮಾದರಿಯಾಗಿದ್ದಾರೆ ಎಂದು ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಪ್ರತಿಕ್ರಿಯಿಸಿದರು.