ಸರ್ಕಾರಿ ಶಾಲೆಗಳ ಆಸ್ತಿಗಳಿಗೆ ಇ ಸ್ವತ್ತು

Govt Schools Property, E Asset, Revenue AC, Abid Gadyala, Indi,
ಇಂಡಿ ಪಟ್ಟಣದ ಎಸಿ ಕಚೇರಿ ಸಬಾಭವನದಲ್ಲಿ ಸರ್ಕಾರಿ ಶಾಲಾ ಆಸ್ತಿಗಳ ಇ-ಸ್ವತ್ತು ಆಂದೋಲನ ಕಾರ್ಯಕ್ರಮದಲ್ಲಿ ಎಸಿ ಅಬೀದ್ ಗದ್ಯಾಳ ಮಾತನಾಡಿದರು. ಟಿ.ಎಸ್. ಆಲಗೂರ, ಎಸ್.ಆರ್.ನಡುಗಡ್ಡಿ ಇತರರಿದ್ದರು.
Published on

ಇಂಡಿ: ತಾಲೂಕಿನಲ್ಲಿ ಸರ್ಕಾರಿ ಶಾಲೆಗಳಿಗೆ ಸಂಬಂಧಿಸಿದ ಆಸ್ತಿಗಳಿಗೆ ಕಾನೂನು ಭದ್ರತೆ ಕಲ್ಪಿಸುವ ಕಾರ್ಯಕ್ಕೆ ತಾಲೂಕು ಆಡಳಿತ ಮುಂದಾಗಿದ್ದು, ಈ ವರ್ಷದಿಂದ ಶಾಲೆಗಳ ಆಸ್ತಿಗಳಿಗೆ ಇ ಸ್ವತ್ತು ಮಾಡಲಾಗುವುದು ಎಂದು ಕಂದಾಯ ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.

ಪಟ್ಟಣದ ಮಿನಿ ವಿಧಾನಸೌಧದ ಎಸಿ ಸಭಾಭವನದಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮದ ಹೊರಗೆ ಇರುವ ಶಾಲಾ ಆಸ್ತಿಗೆ ಆರ್.ಟಿ.ಸಿ ಮಾಡಬೇಕು. ಗ್ರಾಮದ ಒಳಗೆ ಇರುವ ಸರ್ಕಾರಿ ಶಾಲೆಯ ಆಸ್ತಿಗೆ ಇ-ಸ್ವತ್ತು ಮಾಡಬೇಕು ಎಂದರು.

ಕ್ಷೇತ್ರಶಿಕ್ಷಣಾಧಿಕಾರಿ ಟಿ.ಎಸ್. ಆಲಗೂರ ಮಾತನಾಡಿ, ಸರ್ಕಾರಿ ಶಾಲೆಗಳ ನಿರ್ಮಾಣಕ್ಕಾಗಿ ಹಿಂದೆ ಸಾಕಷ್ಟು ದಾನಿಗಳು ನೀಡಿದ ಜಮೀನನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಖಾತೆ ಮಾಡಿಸಿಕೊಳ್ಳಲು ಮುಂದಾಗಿರಲಿಲ್ಲ. ಇದರಿಂದ ದಾನಿಗಳ ವಂಶಸ್ಥರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಶಾಲೆಯ ಜಾಗವನ್ನು ಮರಳಿ ಪಡೆಯುವಂತಾಗಿತ್ತು. ಆದ್ದರಿಂದ ಶಿಕ್ಷಣ ಇಲಾಖೆ ತಾಲೂಕಿನಲ್ಲಿರುವ ಶಾಲೆ ಆಸ್ತಿಗಳ ಇ ಸ್ವತ್ತು ಅಂದೋಲನ ಆರಂಭಿಸಿದೆ. ಅದರಂತೆ ಕೇವಲ ಒಂದು ವರ್ಷದ ಅವಧಿಯಲ್ಲಿ ಶಾಲೆಗಳ ಆಸ್ತಿಗಳನ್ನು ಖಾತೆ ಮಾಡುವ ಮೂಲಕ ಕಾನೂನು ಭದ್ರತೆ ನೀಡುತ್ತಿರುವುದು ಶ್ಲಾಘನೀಯ ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಆರ್.ನಡುಗಡ್ಡಿ ಮಾತನಾಡಿ, ಸರ್ಕಾರಿ ಶಾಲಾ ಆಸ್ತಿಗಳಿಗೆ ಇ ಸ್ವತ್ತು ಮಾಡಿರುವ ದಾಖಲೆಗಳನ್ನು ್ರೇಮ್ ಮಾಡಿ ಅಳವಡಿಸಬೇಕು. ಇದರೊಂದಿಗೆ ಕ್ಷೇತ್ರಶಿಕ್ಷಣಾಧಿಕಾರಿಗಳು ಹಾಗೂ ತಾಲೂಕು ಆಡಳಿತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವ ಮೂಲಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ನೋಡಿಕೊಳ್ಳಲಾಗಿದೆ ಎಂದರು.

ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಯ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದು ಕಂಡು ಬಂದಿದೆ. ಆ ಹಿನ್ನೆಲೆಯಲ್ಲಿ ಶಾಲೆ ಎಷ್ಟು ವರ್ಷದಿಂದ ನಡೆಸಲಾಗುತ್ತಿದೆ ಎಂಬ ದಾಖಲೆಗಳ ಆಧಾರದ ಮೇಲೆ ಖಾತೆ ಮಾಡುವಂತೆ ಎಸಿಯವರು ಸೂಚನೆ ನೀಡಿದ್ದಾರೆ. ತಿಂಗಳೊಳಗಾಗಿ ನ್ಯಾಯಾಲಯದಲ್ಲಿರುವ ಪ್ರಕಣಗಳನ್ನು ಹೊರತುಪಡಿಸಿ ಉಳಿದೆಲ್ಲ ಶಾಲೆಗಳ ಆಸ್ತಿಗಳಿಗೆ ಕಾನೂನು ಭದ್ರತೆ ಸಿಗಲಿದೆ. ತಾಲೂಕಿನಲ್ಲಿ ಒಟ್ಟು 273 ಶಾಲೆಗಳಿದ್ದು, ಅದರಲ್ಲಿ 19 ಸರ್ಕಾರಿ ಪ್ರೌಢಶಾಲೆ ಮತ್ತು 254 ಪ್ರಾಥಮಿಕ ಶಾಲೆಗಳಿವೆ ಎಂದರು.

ವೇದಿಕೆಯ ಮೇಲೆ ಶಿಕ್ಷಣ ಸಂಯೋಜಕ ಆನಂದಪ್ಪ ಹುಣಸಗಿ, ಎ.ಬಿ.ಚೌಧರಿ ಇದ್ದರು. ಸಭೆಯಲ್ಲಿ ತಾಲೂಕಿನ ಎಲ್ಲ ಸಿಆರ್‌ಪಿ ಹಾಗೂ ಮುಖ್ಯ ಗುರುಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net