ಸರ್ಕಾರಿ ಶಾಲೆಗಳ ಮುಚ್ಚುವ ಹುನ್ನಾರ ಸಲ್ಲ : ವಿಜಯಪುರದಲ್ಲಿ ಎಐಡಿಎಸ್‌ಒ ಸಂಘಟನೆ ಕಾರ್ಯಕರ್ತರ ಪ್ರತಿಭಟನೆ

hn 30-1
ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುತ್ತಿರುವ ಸರ್ಕಾರದ ನಿರ್ಧಾರ ಖಂಡಿಸಿ ಎಐಡಿಎಸ್‌ಒ ಸಂಘಟನೆ ಕಾರ್ಯಕರ್ತರು ಶನಿವಾರ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಸಂಘಟನೆ ಜಿಲ್ಲಾಧ್ಯಕ್ಷೆ ಸುರೇಖಾ ಕಡಪಟ್ಟಿ, ಕಾವೇರಿ ರಜಪೂತ, ದೀಪಾ ವಡ್ಡರ ಇತರರಿದ್ದರು.
Published on

ವಿಜಯಪುರ: ಸರ್ಕಾರಿ ಶಾಲೆಗಳ ವಿಲೀನಗೊಳಿಸುತ್ತಿರುವ ಸರ್ಕಾರದ ನಿರ್ಧಾರ ಖಂಡಿಸಿ ಎಐಡಿಎಸ್‌ಒ ಸಂಘಟನೆ ಕಾರ್ಯಕರ್ತರು ಶನಿವಾರ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆ ಜಿಲ್ಲಾಧ್ಯಕ್ಷೆ ಸುರೇಖಾ ಕಡಪಟ್ಟಿ ಮಾತನಾಡಿ, ರಾಜ್ಯದಲ್ಲಿ 13,800 ಸರ್ಕಾರಿ ಶಾಲೆಗಳನ್ನು ವಿಲೀನ ಮಾಡಬೇಕೆಂದು ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ರಾಜ್ಯದ ಲಕ್ಷಾಂತರ ಬಡ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಬರಸಿಡಿಲು ಬಡಿದಂತಾಗಿದೆ. ಸರ್ಕಾರದ ನಿರ್ಧಾರದಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು ಶಾಶ್ವತವಾಗಿ ಶಿಕ್ಷಣದಿಂದ ದೂರ ಉಳಿಯುವಂತಾಗುತ್ತದೆ. ಸರ್ಕಾರಿ ಶಾಲೆಗಳಲ್ಲಿ, ಪ್ರಮುಖವಾಗಿ ಗ್ರಾಮೀಣ ಭಾಗದಲ್ಲಿ ದಾಖಲಾತಿ ಪ್ರಮಾಣ ಕುಸಿಯುತ್ತಿದೆ. ದಾಖಲಾತಿ 25ಕ್ಕಿಂತ ಕಡಿಮೆ ಇರುವ ಶಾಲೆಗಳನ್ನು ದೊಡ್ಡ ಶಾಲೆಯೊಂದಿಗೆ ವಿಲೀನ ಮಾಡಲಾಗುತ್ತದೆ ಎಂದು ಸರ್ಕಾರ ಹೇಳುತ್ತಿರುವುದನ್ನು ಗಮನಿಸಿದರೆ ಅದು ಸಾರ್ವಜನಿಕ ಸೇವೆಯಿಂದ ದೂರವಾಗುತ್ತಿರುವುದು ಸ್ಪಷ್ಟ ಎಂದರು.

ಸಂಘಟನೆ ನಾಯಕಿ ಸ್ನೇಹಾ ಕಟ್ಟಿಮನಿ ಮಾತನಾಡಿ, ಸರ್ಕಾರದ ಅಂಕಿ ಅಂಶಗಳ ಪ್ರಕಾರ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 35 ಸಾವಿರ ಶಿಕ್ಷಕರ ಕೊರತೆ ಇದೆ. 4767 ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಬ್ಬ ಸಹ ಶಿಕ್ಷಕರು ಇಲ್ಲದ ಶಾಲೆಗಳಿವೆ. ಒಂದು ಶಾಲೆಗೆ 05 ಮತ್ತು 10 ಮಕ್ಕಳು ದಾಖಲಾಗುತ್ತಿರುವ ಅಂಶಗಳು ಬೆಳಕಿಗೆ ಬಂದಿದೆ. ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಲು ಸರ್ಕಾರಗಳು ಏಕೆ ಕ್ರಮ ವಹಿಸುತ್ತಿಲ್ಲ ? ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಏಕೆ ಆದ್ಯತೆ ಆಗುತ್ತಿಲ್ಲ ? ಶಾಲೆಗಳ ವಿಲೀನದಿಂದ ಈ ಎಲ್ಲ ಸಮಸ್ಯೆಗಳು ಪರಿಹಾರ ಆಗುತ್ತವೆಯೇ? ಎಂದು ಪ್ರಶ್ನಿಸಿದರು.

ಕಡಿಮೆ ದಾಖಲಾತಿ ಇರುವ ಸರ್ಕಾರಿ ಶಾಲೆಗಳನ್ನು ವಿಲೀನ ಮಾಡುವ ಮೂಲಕ ಮಾದರಿ ಶಾಲೆ ರಚಿಸುತ್ತೇವೆ ಎಂಬ ನಿಲುವಿನ ಹಿಂದೆ ಶಾಶ್ವತವಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರವಿದೆ ಎಂಬುದು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಈ ಅಪಾಯವನ್ನು ನಾವು ಕಡೆಗಣಿಸಲು ಸಾಧ್ಯವಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಕಾವೇರಿ ರಜಪೂತ, ದೀಪಾ ವಡ್ಡರ ಮುಂತಾದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net