ಸರ್ಕಾರಿ ಶಾಲೆ ಗೋಡೆ ಧ್ವಂಸ

giranichal school
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಇಲ್ಲಿಯ ಕಾರವಾರ ರಸ್ತೆ ಗಿರಣಿಚಾಳದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಒಂದು ಕೊಠಡಿಯ ಮುಂಭಾಗದ ಗೋಡೆಯನ್ನು ಯಾರೋ ದುಷ್ಕರ್ವಿುಗಳು ಕೆಡವಿದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಈ ಶಾಲೆಯಲ್ಲಿ (ಪಕ್ಕದ ಹೊಸ ಕಟ್ಟಡ ಸೇರಿ) 1-5ತರಗತಿಯವರೆಗೆ 22 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ದುಷ್ಕರ್ವಿುಗಳು ಹಾನಿಯುಂಟು ಮಾಡಿರುವ ಶಾಲಾ ಕಟ್ಟಡ ನೂರಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದಾಗಿದೆ. ಸೋಮವಾರ ಸಂಜೆಯ ವೇಳೆಗೆ ಎಲ್ಲವೂ ಸರಿಯಾಗಿಯೇ ಇತ್ತು. ಮಂಗಳವಾರ ಬೆಳಗ್ಗೆ ಶಾಲೆ ಕಟ್ಟಡದ ಮುಂಭಾಗದ ಗೋಡೆ ಬಿದ್ದಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ.

ಈ ಕುರಿತು ಹುಬ್ಬಳ್ಳಿ ಉಪ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ‘ಘಟನೆಯ ಕುರಿತು ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ಮಾಡಿಸಿದ್ದೇವೆ. ಯಾರೋ ದುಷ್ಕರ್ವಿುಗಳು ಶಾಲೆಯ ಮುಂಭಾಗದ ಗೋಡೆಯನ್ನು ಕೆಡವಿದ್ದಾರೆ. ಸುಮಾರು 50 ಸಾವಿರ ರೂ. ನಷ್ಟು ಹಾನಿ ಸಂಭವಿಸಿದೆ. ದುಷ್ಕರ್ವಿುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದೇವೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪ್ಪ ಗೌಡ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಸ್ಥಳೀಯರಿಂದ ಪ್ರತಿಭಟನೆ :

ಶಾಲಾ ಕಟ್ಟಡದ ಗೋಡೆ ಕೆಡವಿದ ದುಷ್ಕರ್ವಿುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸ್ಥಳೀಯ ನಿವಾಸಿಗಳು ಹಾಗೂ ಹಳೇ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.

ಶಾಲೆ ಹತ್ತಿರ ಸೇರಿದ ಪ್ರತಿಭಟನಾಕಾರರು ಕೃತ್ಯ ನಡೆಸಿದ ದುಷ್ಕರ್ವಿುಗಳ ವಿರುದ್ಧ ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಮಹೇಶ ಟೆಂಗಿನಕಾಯಿ, ದುಷ್ಕರ್ವಿುಗಳ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸಿ ತಪಿತಸ್ಥರಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಎಸಿಪಿ ಶಿವಪ್ರಕಾಶ ನಾಯಕ ಅವರಿಗೆ ಸೂಚಿಸಿದರು. ಸರ್ಕಾರಿ ಶಾಲೆ ಉಳಿವಿಗಾಗಿ ಹೋರಾಟ ಮಾಡುವುದಾಗಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.

138ವರ್ಷಗಳ ಇತಿಹಾಸವಿರುವ ಶಾಲೆಯ ಗೋಡೆಯನ್ನು ಕೆಡವಿರುವುದು ಖಂಡನೀಯ. ಈ ದುಷ್ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಬಂಧಿಸಬೇಕು. ಶಿಕ್ಷಣ ಇಲಾಖೆ ತಕ್ಷಣ ಶಾಲೆಯ ದುರಸ್ತಿ ಕಾರ್ಯಕ್ಕೆ ಕ್ರಮ ಕೈಗೊಳ್ಳಬೇಕು. ಅತಿಕ್ರಮಣ ಹಾಗೂ ಇನ್ನಿತರ ಕಾರಣದಿಂದ ಸರ್ಕಾರಿ ಶಾಲೆಗೆ ಧಕ್ಕೆ ತರುವುದು ಸರಿಯಲ್ಲ. ಇತ್ತೀಚೆಗೆ ಬ್ರಾಡ್ ವೇ ಸರ್ಕಾರಿ ಶಾಲೆ ಉಳಿಸಿದ್ದೇವೆ. ಈ ಶಾಲೆಯನ್ನು ಉಳಿಸಲು ಶ್ರಮಿಸುತ್ತೇವೆ ಎಂದು ಶಾಸಕರು ಹೇಳಿದರು.

ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಮಾತನಾಡಿ, ನಾನು ಸಹ ಇದೇ ಶಾಲೆಯಲ್ಲಿ ಕಲಿತಿದ್ದೇನೆ. ಸೋಮವಾರ ರಾತ್ರಿ ಯಾರೋ ಕಿಡಿಗೇಡಿಗಳು ಗೋಡೆಗೆ ಹಾನಿ ಮಾಡಿ ದುಷ್ಕೃತ್ಯ ಮೆರೆದಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಪಾಲಿಕೆ ಮಾಜಿ ಸದಸ್ಯ ಮೋಹನ ಹಿರೇಮನಿ, ಹನುಮಂತಪ್ಪ ಮಾಲಪಲ್ಲಿ, ಮಾರುತಿ ಬಾರಕೇರ, ರವಿ ದೊಡ್ಡಮನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net