

ರಾಯಚೂರು: ಸರ್ಕಾರಿ ಶಾಲೆಗಳ ಬಲವರ್ಧನೆಗೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಅ.2ರಂದು ಶಿಕ್ಷಣ ರಾಷ್ಟ್ರೀಕರಣ ಹೋರಾಟ ಸಮಿತಿ ನೇತೃತ್ವದಲ್ಲಿ ರಾಯಚೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಟಿಪ್ಪು ಸುಲ್ತಾನ್ ಸಂಘದ ಜಿಲ್ಲಾ ಅಧ್ಯಕ್ಷ ಸೈಯದ್ ರಶೀದ್ ಹೇಳಿದರು.
ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ನಗರದ ಜಿಲ್ಲಾ ಕ್ರೀಡಾಂಗಣದಿಂದ ಪಾದಯಾತ್ರೆ ಆರಂಭವಾಗಲಿದ್ದು, ಬೆಂಗಳೂರಿನ ವಿಧಾನಸೌಧಕ್ಕೆ ತೆರಳಿ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಗುವುದು.
ಅವೈಜ್ಞಾನಿಕವಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಮೂಲಕ ಖಾಸಗಿ ಶಾಲೆ ಆರಂಭಕ್ಕೆ ಸರ್ಕಾರವೇ ಪ್ರೋತ್ಸಾಹ ನೀಡುತ್ತಿದೆ. ಶಿಕ್ಷಣ ಕಾಯ್ದೆ ಉಲ್ಲಂಘಿಸಿ ಖಾಸಗಿ ಶಾಲೆಗಳಲ್ಲಿ ಹೆಚ್ಚಿನ ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಶಿಕ್ಷಣ ಸಾಮಗ್ರಿಗಳ ಹೆಸರಿನಲ್ಲಿಯೂ ಹಣ ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಬಡ ಮತ್ತು ಮಧ್ಯಮ ವರ್ಗದ ಜನರು ಖಾಸಗಿ ಶಾಲೆಗಳ ಶುಲ್ಕ ಭರಿಸಲು ಸಾಧ್ಯವಾದ ಸ್ಥಿತಿಯಲ್ಲಿದ್ದಾರೆ. ಈ ಬಗ್ಗೆ ಅನೇಕ ದೂರು ನೀಡಿದರೂ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳದ ಅಸಹಾಯಕ ಸ್ಥಿತಿಯಲ್ಲಿದೆ. ಇದರಿಂದಾಗಿ ಬಡ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುವಂತಾಗಿದೆ. ಖಾಸಗಿ ಶಾಲೆ ರದ್ದುಗೊಳಿಸಿ, ಸರ್ಕಾರಿ ಶಾಲೆಗಳನ್ನು ಬಲವರ್ಧನೆ ಮಾಡಬೇಕೆಂದು ಒತ್ತಾಯಿಸಿದರು.
ಸಂಘದ ಪದಾಧಿಕಾರಿಗಳಾದ ಪ್ರಕಾಶಕುಮಾರ, ತಿಮ್ಮಪ್ಪ ಕಡಗೋಲ, ಮಹ್ಮದ್ ಅನ್ಸಾರಿ, ಅಬ್ದುಲ್ ವಹೀದ್ ಉಪಸ್ಥಿತರಿದ್ದರು.