ಸರ್ಕಾರಿ ಶಾಲೆ ಮಕ್ಕಳ ವಿಮಾನ ಪ್ರಯಾಣ, ರೌಂಡ್ ಟೇಬಲ್ ಇಂಡಿಯಾದಿಂದ ಆಯೋಜನೆ

IMG-20250218-WA0012.jpg
Published on

ಹುಬ್ಬಳ್ಳಿ: ವಿದ್ಯಾರ್ಥಿಯಾಗಿದ್ದಾಗಲೇ ಒಮ್ಮೆ ವಿಮಾನದಲ್ಲಿ ಪ್ರಯಾಣ ಮಾಡಬೇಕು ಎಂಬ ಸರ್ಕಾರಿ ಶಾಲೆಯ ಮಕ್ಕಳ ಕನಸು ಇದೀಗ ನನಸಾಗಿದೆ. ಹುಬ್ಬಳ್ಳಿಯ ರೌಂಡ್ ಟೇಬಲ್ ಇಂಡಿಯಾ ಮತ್ತು ಲೇಡಿಸ್ ಸರ್ಕಲ್ ಇಂಡಿಯಾ "ಸಪನೋ ಕೀ ಉಡಾನ್ ಪ್ಲೆಟ್ ಆಫ್ ಫ್ಯಾಂಟಸಿ' ಕಾರ್ಯಕ್ರಮದ ಅಡಿಯಲ್ಲಿ ಉಣಕಲ್ ಆಶ್ರಯ ಕಾಲನಿಯ ಜೆಎಚ್ ಪಿಎಸ್ ಸರ್ಕಾರಿ ಶಾಲೆಯ 6 ಹಾಗೂ 7ನೇ ತರಗತಿಯ 19 ವಿದ್ಯಾರ್ಥಿಗಳು, ನಾಲ್ವರು ಶಿಕ್ಷಕರಿಗೆ ವಿಮಾನದಲ್ಲಿ ಪ್ರಯಾಣ ಮಾಡಿಸಲಾಗಿದೆ.

ನಗರದ ವಿಮಾನ ನಿಲ್ದಾಣದಿಂದ ಮಂಗಳವಾರ ಬೆಳಗ್ಗೆ ವಿಮಾನದಲ್ಲಿ ಬೆಂಗಳೂರಿಗೆ ತೆರಳಿದ ಸರ್ಕಾರಿ ಶಾಲೆ ಮಕ್ಕಳು ಮತ್ತು ಶಿಕ್ಷಕರು ಬೆಂಗಳೂರಿನ ವಿಧಾನಸೌಧ, ಹೈಕೋರ್ಟ್, ವಿಶ್ವೇಶ್ವರಯ್ಯ ಮ್ಯೂಸಿಯಂ, ನೆಹರು ತಾರಾಲಯ, ಬನ್ನೇರುಘಟ್ಟ ಉದ್ಯಾನಕ್ಕೆ ಭೇಟಿ ನೀಡಿ ವೀಕ್ಷಿಸಿದರು.

ರೌಂಡ್ ಟೇಬಲ್ ಇಂಡಿಯಾ ಚೇರ್ಮನ್ ಅರ್ಜುನ ಮಹಾಜನ್ ಮಾತನಾಡಿ, ಆಧುನಿಕ ಶಿಕ್ಷಣದ ವ್ಯವಸ್ಥೆಯಲ್ಲಿ ಮಕ್ಕಳಿಗೆ ಎಲ್ಲವನ್ನೂ ತೋರಿಸಬೇಕು. ಕಲಿಕೆಗೆ ಆದ್ಯತೆ ನೀಡುವ ದೃಷ್ಟಿಯಿಂದ ಮಕ್ಕಳನ್ನು ವಿಮಾನದಲ್ಲಿ ಪ್ರವಾಸ ಮಾಡಿಸಲಾಗಿದೆ ಎಂದರು.

ಶಿಕ್ಷಕಿ ಅನ್ನಪೂರ್ಣ ಮುದುಗಲ್ ಮಾತನಾಡಿ, ವಿಮಾನಯಾನ ಅದ್ಭುತ ಅನುಭವ ನೀಡಿದೆ. ಸರ್ಕಾರಿ ಶಾಲೆಯ ಅನೇಕ ಮಕ್ಕಳು ರೈಲು ಪ್ರಯಾಣ ಕೂಡ ಮಾಡಿಲ್ಲ. ಇದೀಗ ವಿಮಾನಯಾನ ಮಾಡಿರುವುದು ಖುಷಿ ತಂದಿದೆ. ಇದೊಂದು ಸೌಭಾಗ್ಯ. ನಮ್ಮ ಶಾಲೆಯ ಮಕ್ಕಳಿಗೆ ಈ ಅವಕಾಶ ನೀಡಿದ ರೌಂಡ್ ಟೇಬಲ್ ಇಂಡಿಯಾ ಮತ್ತು ಲೇಡಿಸ್ ಸರ್ಕಲ್ ಇಂಡಿಯಾಗೆ ಅಭಿನಂದನೆಗಳು ಎಂದರು.

ಲೇಡಿಸ್ ಸರ್ಕಲ್ ಇಂಡಿಯಾದ ಚೇರ್ ಪರ್ಸನ್ ಸುವರ್ಣ ಜರತಾರ್ಘರ್, ರೌಂಡ್ ಟೇಬಲ್ ಇಂಡಿಯಾ ಕಾರ್ಯದರ್ಶಿ ವಿಶ್ವನಾಥ ವಾಳ್ವೇಕರ್, ಪೂಜಾ ಮಹಾಜನ್, ವಿಶ್ವಾಸ ಜೀವಣ್ಣವರ, ರೋಹಿತ್ ಲದ್ವಾ, ಮಿಥುನ್ ಜಿಗಳೂರು, ನಿತೇಶ ತೆಲಿಸರಾ, ಅಕ್ಷಯ ಕೊಟ್ಟೂರಶೆಟ್ಟರ್, ಸಂತೋಷ ಕರೆಣ್ಣವರ, ವಿಜೇಶ ಸೈಗಲ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net