

ಯಶೋಧರ ಬಂಗೇರ ಮೂಡುಬಿದಿರೆ
ಎರಡು ವರ್ಷಗಳ ಹಿಂದೆ ಶಿಥಿಲಾವಸ್ಥೆಯಲ್ಲಿದ್ದು, ಬೀಳುವ ಹಂತದಲ್ಲಿದ್ದ ಸರ್ಕಾರಿ ಪ್ರಾಥಮಿಕ ಶಾಲೆಗೆ ಹಳೇ ವಿದ್ಯಾರ್ಥಿಗಳು, ಅಳಿಯೂರಿನ ಗ್ರಾಮಸ್ಥರು ಕಾಯಕಲ್ಪ ನೀಡಿದ್ದು, ಲಾಕ್‌ಡೌನ್ ಸಂದರ್ಭ ನಿರಂತರ ಶ್ರಮದಾನದ ಮೂಲಕ ಹೊಸ ರೂಪು ನೀಡಿದ್ದಾರೆ. ಶಾಲೆಯನ್ನು ಸುಂದರವಾಗಿಸುವುದು ಮಾತ್ರವಲ್ಲದೆ, ಕಲಿಕೆಯ ಗುಣಮಟ್ಟ ಹೆಚ್ಚಿಸಲೂ ಗ್ರಾಮಸ್ಥರು ಕೈಜೋಡಿಸಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ವೃದ್ಧಿಯಾಗಿದೆ.
ಅಳಿಯೂರಿನಲ್ಲಿ 85 ವರ್ಷಗಳ ಹಿಂದೆ ಆರಂಭಗೊಂಡಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡವೂ ಶಿಥಿಲಾವಸ್ಥೆಗೆ ತಲುಪಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು, ಶಿಕ್ಷಣ ಪ್ರೇಮಿಗಳು, ಹಳೇ ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳು ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಿ, ಸಮನ್ವಯ ವೇದಿಕೆ ರಚಿಸಿದರು. ಎರಡು ವರ್ಷ ಹಿಂದೆ ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ ಯುಕೆಜಿ ಆರಂಭಿಸಿ ಇಂಗ್ಲಿಷ್ ಮಾಧ್ಯಮಕ್ಕಾಗಿ ಬೇರೆ ಶಾಲೆಗಳಿಗೆ ಹೋಗುತ್ತಿದ್ದ ಮಕ್ಕಳನ್ನು ಇಲ್ಲಿಗೆ ಬರುವಂತೆ ಮಾಡಲಾಯಿತು.
ಕಟ್ಟಡ ರಿಪೇರಿ
ಮಕ್ಕಳನ್ನು ಸೆಳೆಯಬೇಕಾದರೆ ಕಟ್ಟಡವೂ ಖಾಸಗಿ ಶಾಲೆಯಂತೆ ಆಕರ್ಷಕವಾಗಿದ್ದರೆ ಒಳಿತು ಎಂದು ಮನಗಂಡ ಸಮನ್ವಯ ವೇದಿಕೆ ಲಾಕ್‌ಡೌನ್ ಸಮಯದಲ್ಲಿ ದಾನಿಗಳ ಸಹಕಾರ ಮತ್ತು ಶ್ರಮದಾನದ ಮೂಲಕ ಶಾಲೆಗೆ ಸುಣ್ಣ ಬಣ್ಣ ಬಳಿಯುವ ಕೆಲಸಕ್ಕೆ ಕೈ ಹಾಕಿತ್ತು. ಈ ಸಂದರ್ಭ ಶಾಲೆಯ ಕಟ್ಟಡವೂ ಶಿಥಿಲಗೊಂಡು ಮಳೆಯ ನೀರು ಒಳಗಡೆ ಸೋರುತ್ತಿರುವುದು ಗಮನಕ್ಕೆ ಬಂತು. ಇದರ ಬಗ್ಗೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಗಮನಕ್ಕೆ ತಂದಾಗ ತಾವು ರಿಪೇರಿ ಕಾರ್ಯ ಆರಂಭಿಸಿ ನಾನು ಸಹಕಾರ ನೀಡುತ್ತೇನೆಂದು ಭರವಸೆ ನೀಡಿದರು. ಅದರಂತೆ 85 ವರ್ಷದ ಇತಿಹಾಸವಿರುವ ಶಾಲೆ ಅಭಿವೃದ್ಧಿಗೊಳಿಸಲು ಗ್ರಾಮಸ್ಥರು ಮುಂದಾದರು.
ಲಾಕ್‌ಡೌನ್ ಸಂದರ್ಭ ಊರಿನ ವಿವಿಧ ಸಂಘಟನೆಗಳಾದ ಕೋಟಿ-ಚೆನ್ನಯ ಯುವಶಕ್ತಿ, ಹಳೇ ವಿದ್ಯಾರ್ಥಿಗಳು, ಆಟೋರಿಕ್ಷಾ ಚಾಲಕ-ಮಾಲೀಕರ ಸಂಘ, ಶಾಲಾ ಆಡಳಿತ ಮಂಡಳಿ, ವಿದ್ಯಾರ್ಥಿಗಳ ಪಾಲಕರು ಹನುಮಾನ್ ಫ್ರೆಂಡ್ಸ್‌ನ ಸುಮಾರು 800ರಷ್ಟು ಜನ ಸೇರಿಕೊಂಡು ನಾಲ್ಕೂವರೆ ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾರ್ಯ ಮಾಡಿದರು. ಧ್ವಜಸ್ತಂಭ, ಉಗ್ರಾಣ ಕೊಠಡಿ, ಸ್ಪೋರ್ಟ್ಸ್ ಕೊಠಡಿ, ಶಿಕ್ಷಕರ ಸಂಖ್ಯೆ ಹೆಚ್ಚಿರುವುದರಿಂದ ಅಟ್ಯಾಚ್ ಬಾತ್‌ರೂಮಿನೊಂದಿಗೆ ಕೊಠಡಿ ರಚಿಸಲಾಗಿದ್ದು ಸಮನ್ವಯ ಸಮಿತಿಯಿಂದ ಈಗಾಗಲೇ 7 ಲಕ್ಷ ರೂ. ವೆಚ್ಚದ ಕಾಮಗಾರಿಗಳು ನಡೆದಿವೆ.
205 ವಿದ್ಯಾರ್ಥಿಗಳು
2018ರಲ್ಲಿ 147 ಮಕ್ಕಳಿದ್ದರು. ಅದರಲ್ಲಿ 37 ಮಕ್ಕಳು ಹೊರಹೋದಾಗ ಸಂಖ್ಯೆ ಕಡಿಮೆಯಾಗಿತ್ತು. ಮಕ್ಕಳ ಸಂಖ್ಯೆ ಹೆಚ್ಚಿಸುವ ಉದ್ದೇಶದಿಂದ 2019ರಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗಿದ್ದು, 70 ಮಕ್ಕಳು ದಾಖಲಾತಿ ಪಡೆದುಕೊಂಡಿದ್ದರು. ಎಂಟು ವರ್ಷಗಳ ಹಿಂದೆ 6 ಮತ್ತು 7ನೇ ತರಗತಿಯನ್ನು ಇಂಗ್ಲಿಷ್ ಮಾಧ್ಯಮ ಶಿಕ್ಷಣ ನೀಡಲಾಗಿದೆ. ಸ್ಥಳೀಯ ಜನಪ್ರತಿನಿಧಿಗಳ ಹಾಗೂ ಶಾಸಕರ ಸಹಕಾರದಿಂದ ಎರಡು ಕೊಠಡಿಗಳು ಮಂಜೂರು ಆಗಿದೆ. ನಾಲ್ಕು ಕೊಠಡಿಗಳ ಅವಶ್ಯಕತೆ ಇದೆ. ಶಾಲೆಯಲ್ಲೀಗ 205 ಮಕ್ಕಳಿದ್ದಾರೆ.
ಮುಂದಿನ ದಿನಗಳಲ್ಲಿ ಎಲ್‌ಕೆಜಿಯಿಂದ 10ನೇ ತರಗತಿವರೆಗೂ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಯೋಜನೆ ಆರಂಭಿಸಲಾಗುವುದು. ಅಗತ್ಯವಾಗಿರುವ ಪಿಯು ಕಾಲೇಜು ತರಲೂ ಪ್ರಯತ್ನಿಸಲಾಗುವುದು.
ಪ್ರಶಾಂತ್ ಎನ್., ಕಾರ್ಯದರ್ಶಿ ಸಮನ್ವಯ ಸಮಿತಿ