

ಹನೂರು: ಗಡಿಭಾಗದ ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವುದರ ಮೂಲಕ ಮಾದರಿ ಶಾಲೆಯನ್ನಾಗಿಸಲು ಸರ್ಕಾರ ಮುಂದಾಗಬೇಕು ಎಂದು ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಷಡಾಕ್ಷರಿ ತಿಳಿಸಿದರು.
ಮಲೆಮಹದೇಶ್ವರ ಬೆಟ್ಟ ಸಮೀಪದ ಕಾಡಂಚಿನ ಇಂಡಿಗನತ್ತ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಉತ್ತಮೀಕರಿಸುವ ಸಲುವಾಗಿ ಶನಿವಾರ ಗಡಿನಾಡು ಕನ್ನಡ ಉತ್ಸವದ ನೆನಪಿನಾರ್ಥ ಬೃಹತ್ ಎಲ್ಇಡಿ ಟಿವಿ ಹಾಗೂ ಇನ್ನಿತರ ಪರಿಕರ ವಿತರಿಸಿ ಮಾತನಾಡಿದರು.
ಮ. ಬೆಟ್ಟದ ತಪ್ಪಲಿನ ಶಾಲೆಗಳು ಕಾಡಂಚಿನಲ್ಲಿದೆ. ಆದರೆ ಅಗತ್ಯ ಮೂಲಸೌಕರ್ಯಗಳ ಕೊರತೆ ಇದೆ. ಇತ್ತ ಸಾರಿಗೆ ವ್ಯವಸ್ಥೆ ಇಲ್ಲದ ಪರಿಣಾಮ ಶಿಕ್ಷಕರು, ವಿದ್ಯಾರ್ಥಿಗಳು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಈ ನಿಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ದಾನಿಗಳು ಶಾಲೆಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ಹಲವು ಸವಲತ್ತುಗಳನ್ನು ಕಲ್ಪಿಸಲು ಮುಂದಾಗುತ್ತಿರುವುದು ಶ್ಲಾಘನೀಯ. ದುಡಿದ ಹಣದಲ್ಲಿ ಸ್ವಲ್ಪ ಹಣವನ್ನಾದರೂ ಇಂತಹ ಸಾಮಾಜಿಕ ಸೇವ ಕಾರ್ಯಗಳಿಗೆ ಬಳಸಿದರೆ ಜೀವನದಲ್ಲಿ ತೃಪ್ತಿ ದೊರಕುತ್ತದೆ ಎಂದರು.
ಸರ್ಕಾರ ಮಕ್ಕಳ ಶಿಕ್ಷಣಕ್ಕೆ ಕೋಟ್ಯಂತರ ರೂ ವ್ಯಯಿಸುತ್ತಿದೆ. ಪಠ್ಯಪುಸ್ತಕ, ಶಾಲಾ ಬ್ಯಾಗ್, ಸಮವಸ್ತ್ರ, ಶೂ ಸೇರಿದಂತೆ ಅನೇಕ ಸವಲತ್ತು ಒದಗಿಸುತ್ತಿದೆ. ಆದರೆ ನಗರ ಪ್ರದೇಶದ ಶಾಲೆಗಳಿಗೆ ಕಾಡಂಚಿನ ಗಡಿ ಗ್ರಾಮದ ಶಾಲೆಗಳನ್ನು ಹೋಲಿಸಿದರೆ ಸೌಕರ್ಯ ಕೊರತೆ ಇದೆ. ಆದರಿಂದ ಸರ್ಕಾರ ಇಂತಹ ಶಾಲೆಗಳಿಗೆ ಅಗತ್ಯ ಸೌಕರ್ಯವನ್ನು ಒದಗಿಸುವ ಮೂಲಕ ಉನ್ನತಿಕರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಇದರಿಂದ ಶಾಲೆಗಳ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.