ವೈದ್ಯರ ಬೇಡಿಕೆಗೆ ಸ್ಪಂದನೆ: 125 ಕೋಟಿ ರೂ. ಇನ್ಸೆಂಟೀವ್ ನೀಡಲು ಒಪ್ಪಿದ ಸರ್ಕಾರ

B Sriramulu Ballari
Published on

ಬೆಂಗಳೂರು: ಮುಷ್ಕರನಿರತ ವೈದ್ಯರ ಜತೆ ಸರ್ಕಾರ ನಡೆಸಿದ ಮಾತುಕತೆ ಯಶಸ್ವಿ ಯಾಗಿದ್ದು, ಮುಷ್ಕರ ಹಿಂಪಡೆಯಲಾಗಿದೆ. ದೆಹಲಿ ಪ್ರವಾಸದಲ್ಲಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಹಣಕಾಸು ಕಾರ್ಯದರ್ಶಿ ಜತೆ ದೂರವಾಣಿಯಲ್ಲಿ ಮಾತನಾಡಿ 125 ಕೋಟಿ ರೂ. ಹೆಚ್ಚುವರಿ ಇನ್ಸೆಂಟೀವ್ ನೀಡಲು ಸೂಚಿಸಿದ ಬಳಿಕ ವೈದ್ಯರು ಮುಷ್ಕರ ಹಿಂಪಡೆದರು. ಮಾತುಕತೆ ಬಳಿಕ ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಮಾತನಾಡಿ, ವೈದ್ಯರ ಬೇಡಿಕೆ ಈಡೇರಿಕೆಗೆ ಸರ್ಕಾರ ಸ್ಪಂದಿಸಿದ್ದು, ಅವರು ಮುಷ್ಕರ ಹಿಂಪಡೆದಿದ್ದಾರೆ ಎಂದು ಅಧಿಕೃತವಾಗಿ ಪ್ರಕಟಿಸಿದರು. ಇನ್ನು ಮುಂದೆ ಕೋವಿಡ್ ಚಿಕಿತ್ಸೆಗೆ ಅಡಚಣೆ ಆಗುವುದಿಲ್ಲ. ಇವತ್ತಿನಿಂದ ಕರೊನಾ ಹೆಲ್ತ್ ಬುಲೆಟಿನ್ ಎಂದಿನಂತೆ ಬಿಡುಗಡೆ ಆಗಲಿದೆ ಎಂದರು.

ಸಕಾರಾತ್ಮಕ ಸ್ಪಂದನೆ: ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಗುಳೂರು ಶ್ರೀನಿವಾಸ್ ಮಾತನಾಡಿ, ಹೆಚ್ಚುವರಿ ಇನ್ಸೆಂಟೀವ್ ಕೊಡಲು ಒಪ್ಪಿಗೆ ಸೇರಿ ನಮ್ಮ ಎಲ್ಲ ಬೇಡಿಕೆಗಳಿಗೂ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಜತೆಗೆ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದಲೂ ಮುಷ್ಕರ ಹಿಂಪಡೆಯುತ್ತಿದ್ದೇವೆ. ಕೆಲಸಕ್ಕೆ ನಾವು ಹಾಜರಾಗುತ್ತೇವೆ ಎಂದರು.

ಶ್ರೀರಾಮುಲು ಎಚ್ಚರಿಕೆ: ಕೋವಿಡ್​ಗೆ ಶೇ.50 ಬೆಡ್ ನೀಡಲು ಖಾಸಗಿ ಆಸ್ಪತ್ರೆಗಳ ಜತೆ ಸರಕಾರ ಒಡಂಬಡಿಕೆ ಮಾಡಿಕೊಂಡಿದೆ. ಇದಕ್ಕೆ ಸಹಕಾರ ನೀಡದೆ ಇರುವ 26 ಆಸ್ಪತ್ರೆಗೆ ನೋಟಿಸ್ ನೀಡಿದ್ದೇವೆ. ಇದೇ ಅಸಹಕಾರ ಮುಂದುವರಿದರೆ ಎಫ್​ಐಆರ್ ಹಾಕಲಾಗುವುದು. ಬಳಿಕ ಆಸ್ಪತ್ರೆಯ ಮಾನ್ಯತೆ ರದ್ದು ಮಾಡಲು ಕ್ರಮ ಜರುಗಿಸಲಾಗುವುದು ಎಂದರು.

ಕೋಟ್ಯಾನ್​ಗೆ ಕೋವಿಡ್

ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅಧಿವೇಶನಕ್ಕೆ ತೆರಳುವ ಮುನ್ನ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು, ಗುರುವಾರ ಬಂದ ವರದಿಯಲ್ಲಿ ಕರೊನಾ ದೃಢಪಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net