ನಿರ್ಬಂಧ ಹೇರಿರುವುದರಲ್ಲಿ ಸರ್ಕಾರಕ್ಕೆ ಸಂತೋಷವೇನೂ ಇಲ್ಲ, ತುಂಬಾ ಬೇಸರವಿದೆ

Published on

ಚಿಕ್ಕಬಳ್ಳಾಪುರ: ಕರೊನಾ ಸೋಂಕಿನ ಎರಡನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ದಿಢೀರನೇ ಅನೇಕ ಚಟುವಟಿಕೆಯ ಮೇಲೆ ನಿರ್ಬಂಧ ಹೇರಿರುವುದಕ್ಕೆ ಸಿನಿಮಾ ಕ್ಷೇತ್ರ ಸೇರಿ ಹಲವು ವಲಯಗಳಿಂದ ಅಸಮಾಧಾನ ವ್ಯಕ್ತವಾಗಿರುವುದರ ನಡುವೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್, ತಾಂತ್ರಿಕ ಸಲಹಾ ಸಮಿತಿಯ ಸಲಹೆಯಂತೆ ಹೊಸ ಮಾರ್ಗಸೂಚಿಯನ್ನು ಅನಿವಾರ್ಯವಾಗಿ ಪ್ರಕಟಿಸಬೇಕಾಯಿತು ಎಂದು ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗಲೇ ದಿನನಿತ್ಯ ಸೋಂಕಿನ 4500 ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಅದರಲ್ಲೂ ಎರಡನೇ ಅಲೆಯ ಆತಂಕದ ಪ್ರಾರಂಭದಲ್ಲಿಯೇ ಪ್ರಕರಣಗಳ ಹೆಚ್ಚಳವು ಅಪಾಯ ಸ್ಥಿತಿಗೆ ನಿದರ್ಶನ ಎಂದು ತಿಳಿಸಿದರು.


ವಾಣಿಜ್ಯಾತ್ಮಕ ಚಟುವಟಿಕೆಗೆ ನಿರ್ಬಂಧ ಹೇರಿರುವುದರಲ್ಲಿ ಸರ್ಕಾರಕ್ಕೆ ಸಂತೋಷವೇನೂ ಇಲ್ಲ. ತುಂಬಾ ಬೇಸರವಿದೆ. ಜತೆಗೆ ಹೊಸ ಮಾರ್ಗಸೂಚಿ ಅನುಷ್ಠಾನದಿಂದಾಗುವ ಲಾಭ ನಷ್ಟದ ಲೆಕ್ಕಾಚಾರದ ಅರಿವಿದೆ. ಈಗಾಗಲೇ ಹಲವರು ತೊಂದರೆ ಅನುಭವಿಸುತ್ತಿರುವುದನ್ನು ಒಪ್ಪಿಕೊಳ್ಳುವೆ. ಆದರೆ, ತಾಂತ್ರಿಕ ಸಲಹಾ ಸಮಿತಿಯ ವರದಿಯಾಧಾರದ ಮೇಲೆ ಅನಿವಾರ್ಯವಾಗಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಾಯಿತು. ಶಾಲಾ ಕಾಲೇಜು, ಕಲ್ಯಾಣ ಮಂಟಪ, ಧಾರ್ಮಿಕ ಕೇಂದ್ರಗಳನ್ನು ಮುಚ್ಚುವುದರಿಂದ ಸಂತಸಪಡಲಾಗುತ್ತದೆಯೇ? ಎಂದು ಪ್ರಶ್ನಿಸಿದರು.

ಕರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುತ್ತದೆ. ಇದನ್ನು ನಿಯಂತ್ರಿಸಲು ಪ್ರತಿಯೊಬ್ಬರು ಅಗತ್ಯ ಸಹಕಾರ ನೀಡಬೇಕು. ಸರ್ಕಾರದ ಮಾರ್ಗಸೂಚಿ ನಿಯಮಗಳನ್ನು ಸ್ವಯಂ ಪ್ರೇರಣೆಯಿಂದ ಪಾಲಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net