ಸರ್ಕಾರಿ ಅಧಿಕಾರಿಗಳು ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಿ: ಪವನ್ ಕುಮಾರ್

arji svikaara
Published on

ಮಡಿಕೇರಿ: ಸರ್ಕಾರಿ ನೌಕರರು ನಿಯಮಾನುಸಾರ ಕಾಲ ಮಿತಿಯೊಳಗೆ ಕರ್ತವ್ಯ ನಿರ್ವಹಿಸಿದ್ದಲ್ಲಿ ಜಿಲ್ಲಾಡಳಿತಕ್ಕೆ ಒಳ್ಳೆಯ ಹೆಸರು ಬರಲಿದೆ. ಇದರಿಂದ ಸರ್ಕಾರಕ್ಕೆ ಉತ್ತಮ ಹೆಸರು ದೊರೆಯಲಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕರನ್ನು ಸತಾಯಿಸದೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಲೋಕಾಯುಕ್ತ ಡಿವೈಎಸ್‌ಪಿ ಎಂ.ಎಸ್.ಪವನ್ ಕುಮಾರ್ ಹೇಳಿದರು.


ನಗರದ ತಹಶೀಲ್ದಾರರ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕರಿಂದ ದೂರು ಅರ್ಜಿ ಸ್ವೀಕರಿಸಿ ಮಾತನಾಡಿ, ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಆಗಮಿಸಿದಾಗ ಸೌಜನ್ಯದಿಂದ ನಡೆದುಕೊಳ್ಳಬೇಕು. ಸಾರ್ವಜನಿಕರನ್ನು ಕುಳಿತು ಮಾತನಾಡಿಸಬೇಕು. ತಮ್ಮ ಹಂತದಲ್ಲಿ ಕೆಲಸ ಆದಲ್ಲಿ ಕಾಲ ಮಿತಿಯಲ್ಲಿ ಮಾಡಿಕೊಡಬೇಕು. ಕೆಲಸ ಆಗದಿದ್ದಲ್ಲಿ ಹಿಂಬರಹವನ್ನಾದರೂ ನೀಡಬೇಕು ಎಂದು ಲೋಕಾಯುಕ್ತ ಡಿವೈಎಸ್‌ಪಿ ಸಲಹೆ ಮಾಡಿದರು.


ಸರ್ಕಾರಿ ಕಚೇರಿಗಳಲ್ಲಿ ಮಾಜಿ ಸೈನಿಕರು ಹಾಗೂ ವೃದ್ಧರಿಗೆ ಪ್ರಥಮ ಆದ್ಯತೆ ನೀಡಿ ಕೆಲಸ ಮಾಡಬೇಕು. ಮಹಿಳೆಯರು ಹಾಗೂ ಇತರರಿಗೆ ಹಲವು ದಾಖಲಾತಿ, ಪ್ರಮಾಣ ಪತ್ರಗಳಿಗೆ ಕಚೇರಿಗೆ ಆಗಮಿಸಿದಾಗ ನಿಯಮಾನುಸಾರ ಕೆಲಸ ಮಾಡಿಕೊಡಬೇಕು ಎಂದರು.


ಪ್ರತೀ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಗುರುತಿನ ಚೀಟಿಯನ್ನು ಹೊಂದಿರಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಬೇಕು ಎಂದು ನಿರ್ದೇಶನ ನೀಡಿದರು.


ಸಾರ್ವಜನಿಕರು ಕಚೇರಿಗೆ ಬಂದಾಗ ಹಲವು ಸಲಹೆ, ಮಾರ್ಗದರ್ಶನ ನೀಡಿದ್ದಲ್ಲಿ ಅಲೆಯುವುದು ತಪ್ಪುತ್ತದೆ. ಆ ನಿಟ್ಟಿನಲ್ಲಿ ಪ್ರಮಾಣ ಪತ್ರ ಅಥವಾ ಇತರೆ ದಾಖಲಾತಿಗೆ ಕಚೇರಿಗೆ ಬಂದಾಗ ಸಾರ್ವಜನಿಕರು ಪರದಾಡದಂತೆ ನೋಡಿಕೊಳ್ಳಬೇಕು. ಕಚೇರಿಗಳಲ್ಲಿ ಅಗತ್ಯ ದಾಖಲಾತಿ ಪಡೆಯಲು ಮಾಹಿತಿಯ ಫಲಕ ಪಟ್ಟಿಯನ್ನು ಕಚೇರಿಯಲ್ಲಿ ಅಳವಡಿಸಬೇಕು. ಇದರಿಂದ ಸಾರ್ವಜನಿಕರಿಗೆ ಉಂಟಾಗುವ ಕಿರಿಕಿರಿ ತಪ್ಪುತ್ತದೆ ಎಂದರು.


ಸರ್ಕಾರಿ ನೌಕರರು ಸಮಾಜಕ್ಕೆ ಜವಾಬ್ದಾರಿಯಾಗಿ ಕರ್ತವ್ಯ ನಿರ್ವಹಿಸಬೇಕು. ಎಲ್ಲಾ ಕಚೇರಿಗಳಲ್ಲಿ ಲೋಕಾಯುಕ್ತ ಫಲಕವನ್ನು ಅಳವಡಿಸಬೇಕು. ದಾಖಲೆ ನೆಪದಲ್ಲಿ ಕಾಲ ವಿಳಂಬ ಮಾಡಬಾರದು ಎಂದು ಲೋಕಾಯುಕ್ತ ಡಿವೈಎಸ್‌ಪಿ ಹೇಳಿದರು.


ದೂರು ಅರ್ಜಿ ಸ್ವೀಕಾರ ಸಂದರ್ಭದಲ್ಲಿ ೮ ದೂರು ಅರ್ಜಿಗಳು ದಾಖಲಾಗಿದ್ದು, ಕಂದಾಯ ಹಾಗೂ ಭೂ ದಾಖಲೆಗಳ ಇಲಾಖೆಗೆ ಒಳಪಟ್ಟಿವೆ. ೯೪ಸಿ. ಫೌತಿ ಖಾತೆ, ಆರ್‌ಟಿಸಿ ತಿದ್ದುಪಡಿ, ಮಳೆ ಹಾನಿ ಪರಿಹಾರ, ಬೀಟೆ ಮರ ಕಡಿಯಲು ಸರ್ವೇ ಮಾಡಿದ್ದು, ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸದಿರುವ ಬಗ್ಗೆ ಮತ್ತಿತರ ಅರ್ಜಿಗಳು ಸ್ವೀಕೃತಿಯಾಗಿವೆ ಎಂದು ಲೋಕಾಯುಕ್ತ ಡಿವೈಎಸ್‌ಪಿ ತಿಳಿಸಿದರು.


ಮುಂದಿನ ದಿನಗಳಲ್ಲಿ ಪ್ರತೀ ತಿಂಗಳ ಎರಡನೇ ಬುಧವಾರ(ಸೋಮವಾರಪೇಟೆ, ಕುಶಾಲನಗರ, ವಿರಾಜಪೇಟೆ ಅಥವಾ ಪೊನ್ನಂಪೇಟೆ) ಇಲ್ಲಿ ಸಾರ್ವಜನಿಕರಿಂದ ದೂರು ಅರ್ಜಿ ಸ್ವೀಕರಿಸಲಾಗುತ್ತದೆ. ಜತೆಗೆ ಪ್ರತೀ ತಿಂಗಳ ಎರಡನೇ ಶುಕ್ರವಾರ ಮಡಿಕೇರಿಯ ತಹಶೀಲ್ದಾರರ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕರಿಂದ ದೂರು(ಸರ್ಕಾರಿ ರಜೆ ದಿನ ಹೊರತುಪಡಿಸಿ) ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ೦೮೨೭೨-೨೯೫೨೯೭ ಹಾಗೂ ಲೋಕಾಯುಕ್ತ ಡಿವೈಎಸ್‌ಪಿರವರ ಇಲಾಖಾ ಮೊಬೈಲ್ ಸಂಖ್ಯೆ ೯೩೬೪೦೬೨೫೭೮ ನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.


ಸಭೆಯಲ್ಲಿ ನಗರಸಭೆ ಪೌರಾಯುಕ್ತ ವಿಜಯ್, ಸಮಾಜ ಕಲ್ಯಾಣ ಇಲಾಖೆ ಉಪನಿದೇರ್ಶಕರು ಶೇಖರ್, ಹಿರಿಯ ಕಾರ್ಮಿಕ ನಿರೀಕ್ಷಕರು ಎಂ.ಎಂ.ಯತ್ನೆಟ್ಟಿ, ತಹಶೀಲ್ದಾರ್ ಪ್ರವೀಣ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net