ಶಾಲೆ-ಕಾಲೇಜು ಆರಂಭಕ್ಕೆ ಸರ್ಕಾರದಿಂದ ಸಕಲ ಸಿದ್ಧತೆ - ಕರೊನಾ ಮಾರ್ಗಸೂಚಿ ಪಾಲನೆ ಮಾಡುವಂತೆ ಸೂಚನೆ

School
Published on

ಬೆಂಗಳೂರು : ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ಹಾಗೂ ವಿದ್ಯಾಗಮ ತರಗತಿಗಳು ಜ.1 ರಿಂದ (ಶುಕ್ರವಾರ) ಆರಂಭವಾಗಲಿದ್ದು, ಇದಕ್ಕೆ ಎಲ್ಲ ರೀತಿಯ ಸಿದ್ಧತೆಗಳು ನಡೆದಿವೆ. ಕಳೆದ ಹತ್ತು ತಿಂಗಳಿಂದ ಮುಚ್ಚಿದ್ದ ಶಾಲೆಗಳು ಜ.1ರಂದು ಆರಂಭವಾಗಲಿದೆ. ಈಗಾಗಲೇ ಶಾಲೆ ಆರಂಭಕ್ಕೆ ಬೇಕಾದ ಸಿದ್ಧತೆಯನ್ನು ಶಿಕ್ಷಣ ಇಲಾಖೆ ಮಾಡಿಕೊಂಡಿದ್ದು, ಸರಳ ರೀತಿಯಲ್ಲಿ ಶಾಲೆ ಆರಂಭೋತ್ಸವ ನಡೆಸಲು ನಿರ್ಧರಿಸಲಾಗಿದೆ.

ಜ.1ರಂದು ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ತರಗತಿಗಳ ಜತೆಗೆ ಶಾಲಾ ಆವರಣದಲ್ಲೇ 6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮವೂ ನಡೆಯಲಿದೆ. ತರಗತಿ ಹಾಗೂ ವಿದ್ಯಾಗಮಕ್ಕೆ ಸಂಬಂಧಿಸಿದ ವೇಳಾಪಟ್ಟಿ, ವಿದ್ಯಾರ್ಥಿಗಳ ತಂಡ ರಚನೆ ಹಾಗೂ ಸಮಯದ ವಿಂಗಡನೆ ಸೇರಿ ಶೈಕ್ಷಣಿಕವಾಗಿ ಆಗಬೇಕಿರುವ ಎಲ್ಲ ಬಗೆಯ ಕಾರ್ಯದ ಬಗ್ಗೆ ಶಿಕ್ಷಣ ಇಲಾಖೆ ಸಿದ್ದತೆ ಮಾಡಿಕೊಳ್ಳಲಾಗಿದೆ.

ಶಾಲೆ ಆರಂಭೋತ್ಸವ : ಕರೊನಾ ಸಂಕಷ್ಟದ ನಡುವೆ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಮೊದಲ ದಿನ ಸಕಾರಾತ್ಮಕ ಭಾವನೆ ಮೂಡಿಸುವ ಉದ್ದೇಶದಿಂದ ಸೂಕ್ತ ಮುನ್ನೆಚ್ಚರಿಕಾ ಕ್ರಮದ ಜತೆಗೆ ಶಾಲಾವರಣವನ್ನು ಶೃಂಗಾರಗೊಳಿಸಲು ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಮುಖ್ಯ ಶಿಕ್ಷಕರಿಗೆ ಸೂಚಿಸಿದೆ. ಪ್ರತಿ ವರ್ಷ ಮೇ ತಿಂಗಳ ಅಂತ್ಯಕ್ಕೆ ಶಾಲಾರಂಭೋತ್ಸವ ನಡೆಯುತ್ತಿತ್ತು. ಆದರೆ, ಈ ಬಾರಿ ಕರೊನಾ ಭೀತಿ ಇರುವ ಹಿನ್ನೆಲೆಯಲ್ಲಿ ಸರಳವಾಗಿ ಶಾಲಾ ಪ್ರಾರಂಭೋತ್ಸವ ನಡೆಸಲು ಸೂಚಿಸಲಾಗಿದೆ.

ಶಾಲಾರಂಭೋತ್ಸವದ ತಯಾರಿ ಪರಿಶೀಲಿಸಲು ಅಧಿಕಾರಿಗಳನ್ನೂ ನೇಮಿಸಲಾಗಿದೆ. ನೋಡಲ್ ಅಧಿಕಾರಿಗಳೇ ತಮ್ಮ ವ್ಯಾಪ್ತಿಯ ಶಾಲಾ ಹಂತದ ತಯಾರಿಯ ಬಗ್ಗೆ ಪರಿಶೀಲನೆ ನಡೆಸಿ ಇಲಾಖೆಗೆ ವರದಿ ಸಲ್ಲಿಸಬೇಕಿದೆ. ಅಧಿಕಾರಿಗಳು ಶಾಲಾ ಮಕ್ಕಳಿಗೆ ಸಮವಸ್ತ್ರ ಹಾಗೂ ಮಧ್ಯಾಹ್ನದ ಬಿಸಿಯೂಟದ ಬದಲಿಗೆ ಆಹಾರ ಧಾನ್ಯಗಳಾದ ಅಕ್ಕಿ, ಬೇಳೆ ವಿತರಣೆ ನಡೆಯುತ್ತಿದ್ದೆಯೇ ಎಂಬುದರ ಬಗ್ಗೆಯೂ ಪರಿಶೀಲಿಸಿದ್ದಾರೆ. ಶಾಲೆಗಳು ಆರಂಭವಾಗುತ್ತಿರುವುದಕ್ಕೆ ಮಕ್ಕಳೂ ಸಂತಸಗೊಂಡಿದ್ದು, ಶಾಲಾ ವಠಾರದಲ್ಲಿ ಶೈಕ್ಷಣಿಕ ಚಟುವಟಿಕೆ ಎಂದಿನಂತೆ ಆರಂಭವಾಗಲಿದೆ.

ಗೊಂದಲ ಬೇಡ: ಹೊಸ ರೂಪದ ಕರೊನಾದಿಂದಾಗಿ ಮತ್ತೆ ಭಯದ ವಾತಾವರಣ ನಿರ್ವಣವಾಗಿದ್ದು, ಶಾಲಾ-ಕಾಲೇಜು ಆರಂಭವಾಗುವ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಗೊಂದಲಗಳಿದ್ದವು. ಆದರೆ, ಜ.1 ರಿಂದ ತರಗತಿಗಳನ್ನು ಆರಂಭಿಸಲು ನಿರ್ಧರಿಸಿರುವ ಸರ್ಕಾರ, ಈ ಗೊಂದಲಕ್ಕೆ ತೆರೆ ಎಳೆದಿದೆ. ಕರೊನಾ ಮಾರ್ಗಸೂಚಿಗಳನ್ನು ಸೂಕ್ತ ರೀತಿಯಲ್ಲಿ ಪಾಲನೆ ಮಾಡುವಂತೆ ಎಲ್ಲ ಶಾಲಾ-ಕಾಲೇಜುಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net