ಭ್ರಷ್ಟಾಚಾರ ತನಿಖೆ ನಡೆಸಲು ಸರ್ಕಾರ ಹಿಂಜರಿಯಲ್ಲ: ಸಿದ್ದರಾಮಯ್ಯ

Siddaramaiah
Published on

ಮೈಸೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರಾವಧಿಯ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲು ಸರ್ಕಾರ ಹಿಂಜರಿಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಕಾಲದ ಭ್ರಷ್ಟಾಚಾರಗಳ ಬಗ್ಗೆ ತನಿಖೆ ಮಾಡುವಂತೆ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿರುವ ಸಂಬಂಧ ಪ್ರತಿಕ್ರಿಯಿಸಿ, ಅದರಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಕುಮಾರಸ್ವಾಮಿಯಾಗಲಿ, ನಮ್ಮ ಪಕ್ಷದವರಾಗಲಿ, ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲೇಬೇಕು ಎಂದರು.

ತಮ್ಮ ಆರೋಪಗಳ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಅವರು ಅಧಿವೇಶನದಲ್ಲಿ ಚರ್ಚೆ ಮಾಡಲಿ, ಉತ್ತರ ಕೊಡುತ್ತೇವೆ. ಸರ್ಕಾರ ಓಡಿಹೋಗುವುದಿಲ್ಲ. ಕುಮಾರಸ್ವಾಮಿ ಯಾವಾಗ ಸತ್ಯ ಹೇಳಿದ್ದಾರೆ? ಯಾವಾಗಲೂ ಹಿಟ್ ಆ್ಯಂಡ್ ರನ್ ಕೇಸ್ ಅವರದು. ಸುಳ್ಳನ್ನೆಲ್ಲ ತನಿಖೆ ಮಾಡಿಸಲು ಆಗುವುದಿಲ್ಲ. ಏನಾದರೂ ಆಧಾರ, ದಾಖಲಾತಿ ಇದ್ದರೆ ತನಿಖೆ ಮಾಡಬಹುದು ಎಂದರು.

ಹೆಚ್ಚಿನ ಮೊತ್ತದ ವಿದ್ಯುತ್ ಬಿಲ್ ಅನ್ನು ಅನಗತ್ಯವಾಗಿ ನನ್ನ ಮೇಲೆ ಹೇರಲಾಗಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಉತ್ತರಿಸಿ, ವಿದ್ಯುತ್ ಬಿಲ್ ಅನ್ನು ಬೆಸ್ಕಾಂ ನೀಡುತ್ತದೆ. ಮೊದಲು ತಪ್ಪನ್ನೇ ಮಾಡಿಲ್ಲ ಎಂದವರು ನಂತರ ದಂಡವನ್ನು ಕಟ್ಟಿರುವುದು, ಅವರು ಅಪರಾಧ ಮಾಡಿರುವುದನ್ನು ಒಪ್ಪಿಕೊಂಡಂತಾಗಿದೆ ಎಂದು ಕುಟುಕಿದರು.

ಕುಮಾರಸ್ವಾಮಿ ಕೇವಲ ದ್ವೇಷ ಹಾಗೂ ಅಸೂಯೆ ರಾಜಕಾರಣ ಮಾಡುತ್ತಾರೆ. ನನ್ನ ಮಗ ಯತೀಂದ್ರ ಆಶ್ರಯ ಸಮಿತಿ ಅಧ್ಯಕ್ಷನಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದರೆ, ಅವರ ಮೇಲೆ ವೃಥಾ ಆರೋಪ ಮಾಡುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ಇದುವರೆಗೂ ದ್ವೇಷದ ರಾಜಕಾರಣ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ಕುಮಾರಸ್ವಾಮಿಗೆ ಸುಳ್ಳು ಹೇಳುವುದು ಬಿಟ್ಟರೆ ಬೇರೇನೂ ತಿಳಿದಿಲ್ಲ. ಸುಳ್ಳೇ ಅವರ ಮನೆದೇವರು ಎಂದು ಜರಿದರು.

ಹಿಂದಿನ ಸರ್ಕಾರದ ಶೇ.40 ಕಮಿಷನ್, ಕೋವಿಡ್, ಬಿಟ್ ಕಾಯಿನ್ ಸೇರಿದಂತೆ ಇತರ ಹಗರಣಗಳ ತನಿಖೆಗೆ ಆಯೋಗಗಳನ್ನು ರಚಿಸಲಾಗಿದ್ದು, ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net