ಬಡವರ ಆಶ್ರಯ ನಿರ್ಲಕ್ಷಿಸಿದ ಸರ್ಕಾರ: ಈಶ್ವರಪ್ಪ

EX DCM K S Eshwarappa
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
Published on

ಶಿವಮೊಗ್ಗ: ಗೋವಿಂದಾಪುರ ಮತ್ತು ಗೋಪಿಶೆಟ್ಟಿಕೊಪ್ಪ ಆಶ್ರಯ ಬಡಾವಣೆಯಲ್ಲಿ 3 ಸಾವಿರ ಮನೆ ನಿರ್ಮಿಸಿದರೂ ಮೂಲ ಸೌಕರ್ಯ ಕಲ್ಪಿಸಿಲ್ಲ. ರಸ್ತೆ, ವಿದ್ಯುತ್ ವ್ಯವಸ್ಥೆ ಇದ್ದು ಈಗ ಅದೆಲ್ಲ ಹಾಳಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ದೂರಿದರು.

ಎಲ್ಲ ಮನೆಗಳನ್ನೂ ಬಡವರಿಗೆ ಹಂಚಬೇಕು ಎಂದು ವಸತಿ ಸಚಿವ ಜಮೀರ್ ಅಹಮದ್ ಅವರನ್ನು ಭೇಟಿ ಮಾಡಿ ಕೋರಲಾಗಿತ್ತು. ಆಗ ತಾವೇ ಶಿವಮೊಗ್ಗಕ್ಕೆ ಬರುವುದಾಗಿ ಹೇಳಿದ್ದರು. ಆದರೆ ಸರ್ಕಾರ ಬಡವರನ್ನು ನಿರ್ಲಕ್ಷಿಸಿದೆ ಎಂದರು.
ಆಶ್ರಯ ಮನೆಗಳು ಹಾಳಾಗುವ ಸ್ಥಿತಿಗೆ ಬಂದಿದ್ದು ಈಗಾಗಲೇ 3000 ಮನೆಗಳು ಪೂರ್ಣಗೊಳ್ಳಬೇಕಿತ್ತು. ಆಗಸ್ಟ್‌ಗೆ 800 ಮನೆ ಕೊಡುವುದಾಗಿ ಗುತ್ತಿಗೆದಾರರು ಹೇಳಿದ್ದಾರೆ. ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು ಇದೇ ರೀತಿ ಸಾಗಿದರೆ 10 ವರ್ಷವಾದರೂ ಮನೆ ಕೊಡಲು ಆಗಲ್ಲ. ಹಾಗಾಗಿ ಗೋವಿಂದಾಪುರ, ಗೋಪಿಶೆಟ್ಟಿಕೊಪ್ಪದ ಆಶ್ರಯ ಮನೆಗಳ ವಿತರಣೆಗೆ ಸಚಿವ ಜಮೀರ್ ಅಹ್ಮದ್ ಜು.15ರೊಳಗೆ ಸ್ಥಳಕ್ಕೆ ಭೇಟಿ ನೀಡಬೇಕು. ಅಧಿಕಾರಿಗಳ ಸಭೆ ನಡೆಸಿ ವಿತರಣೆಗೆ ತೀರ್ಮಾನ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಗೆದ್ದ ಮಹಾಲಿಂಗಯ್ಯ ಶಾಸ್ತ್ರಿ ಅವರಿಗೆ ಜು.15ರಂದು ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ನಗರಸಭೆ ಮಾಜಿ ಅಧ್ಯಕ್ಷ ಎಂ.ಶಂಕರ್, ಶಂಕರ್ ಗನ್ನಿ, ಇ.ವಿಶ್ವಾಸ್, ಮಹಾಲಿಂಗಯ್ಯ ಶಾಸ್ತ್ರಿ, ಎಂ.ಜಿ.ಬಾಲು, ಅ.ಮ.ಪ್ರಕಾಶ್, ಚನ್ನಬಸಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

ಪಾಲಿಕೆ ಚುನಾವಣೆಗೆ ಡೆಡ್‌ಲೈನ್
ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಕಳೆದೊಂದು ವರ್ಷದಿಂದ ಜನಪ್ರತಿನಿಧಿಗಳೇ ಇಲ್ಲ. ಚುನಾಯಿತರಿಲ್ಲದೆ ಆಡಳಿತ ನಿರ್ವಹಣೆ ಕಷ್ಟವಾಗಿದೆ. ಪ್ರಜಾಪ್ರಭುತ್ವದಲ್ಲಿ ಇಂತಹ ವ್ಯವಸ್ಥೆ ಕಪ್ಪುಚುಕ್ಕೆ. ರಾಜ್ಯ ಸರ್ಕಾರ ಜು.15ರೊಳಗೆ ಚುನಾವಣೆ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ಹೋರಾಟ ಮಾಡುವುದು ಅನಿವಾರ್ಯ ಎಂದು ಈಶ್ವರಪ್ಪ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net