

ಹರೀಶ್ ಮೋಟುಕಾನ ಮಂಗಳೂರು
ಬಿಜೈಯಲ್ಲಿರುವ ಶ್ರೀಮಂತಿ ಬಾಯಿ ಸರ್ಕಾರಿ ಮ್ಯೂಸಿಯಂ ಷಷ್ಠೃಬ್ದ ಸಂಭ್ರಮದಲ್ಲಿದೆ. ಪ್ರವಾಸಿ ತಾಣವಾಗಿದ್ದರೂ ಸರಿಯಾದ ಪ್ರಚಾರವಿಲ್ಲದೆ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ತೀರ ವಿರಳವಾಗಿದೆ.
ಡಿಸೆಂಬರ್‌ನಲ್ಲಿ 440, ಜನವರಿಯಲ್ಲಿ 340, ಫೆಬ್ರವರಿಯಲ್ಲಿ 343 ಮಂದಿ ಮ್ಯೂಸಿಯಂಗೆ ಭೇಟಿ ನೀಡಿರುವುದು ಇದಕ್ಕೆ ಸಾಕ್ಷಿ. ಆರು ದಶಕಗಳಿಂದ ಇಲ್ಲೊಂದು ಮ್ಯೂಸಿಯಂ ಇದೆ ಎಂದೂ ಹೆಚ್ಚಿನವರಿಗೆ ಗೊತ್ತಿರಲಿಲ್ಲ. ದಿನೇದಿನೆ ಸೊರಗುತ್ತಿರುವ ಮ್ಯೂಸಿಯಂಗೆ ಸದ್ಯ ಕಾಯಕಲ್ಪ ಆಗಬೇಕಿದೆ.
1960ರ ಮೇ 4ರಂದು ಆರಂಭವಾದ ಈ ಮ್ಯೂಸಿಯಂ ದ್ವಿತೀಯ ಮಹಾಯುದ್ಧದಲ್ಲಿ ಸೇನಾ ವೈದ್ಯರಾಗಿದ್ದ ಕರ್ನಲ್ ಮಿರಾಜ್ಕರ್ ಅವರ ಕೊಡುಗೆ. ತಮ್ಮ ತಾಯಿ ಶ್ರೀಮಂತಿ ಬಾಯಿ ಸ್ಮರಣಾರ್ಥ ಈ ಮ್ಯೂಸಿಯಂ ಸ್ಥಾಪಿಸಿದ್ದರು. ಬಳಿಕ ಪ್ರಾಚೀನತೆಯ ಸೊಗಡು ಸಾರ್ವಜನಿಕರಿಗೆ ತಿಳಿಯುವಂತಾಗಲಿ ಎಂದು ಅಪೂರ್ವ ದಾಖಲೆಗಳನ್ನೊಳಗೊಂಡ ಈ ಮ್ಯೂಸಿಯಂ ಅನ್ನು ಸರ್ಕಾರಕ್ಕೆ ಹಸ್ತಾಂತರ ಮಾಡಿದ್ದರು. ಮಂಗಳೂರಿನಲ್ಲಿ ಪ್ರವಾಸಿಗರ ಮುಖ್ಯ ಆಕರ್ಷಣೆಯ ಕೇಂದ್ರವಾಗಬೇಕಿದ್ದ ಮ್ಯೂಸಿಯಂಗೆ ಪ್ರವಾಸಿಗರನ್ನು ಸೆಳೆಯಲು ಮಾಡಬೇಕಾದ ಯಾವುದೇ ಕೆಲಸಗಳನ್ನು ಇಲ್ಲಿನ ಆಡಳಿತ ವರ್ಗ ಮಾಡದಿರುವುದರಿಂದ ಪುರಾತನ ಮ್ಯೂಸಿಯಂ ಜನರಿಂದ ದೂರವೇ ಉಳಿಯುವಂತಾಗಿದೆ.
ನಾಮಲಕವಿಲ್ಲದ ಕಟ್ಟಡ
ಬಿಜೈ ಗುಡ್ಡ ಪ್ರದೇಶದಲ್ಲಿ ಈ ಮ್ಯೂಸಿಯಂ ಇದೆ. ಮುಖ್ಯ ರಸ್ತೆ ಬದಿ ಮ್ಯೂಸಿಯಂಗೆ ದಾರಿ ತೋರಿಸುವ ಬೋರ್ಡ್ ಇದೆ. ಮ್ಯೂಸಿಯಂ ಆವರಣದಲ್ಲಿ ಹಸಿರು ಬೋರ್ಡ್‌ನಲ್ಲಿ ಮ್ಯೂಸಿಯಂ ಹೆಸರು ಬರೆಯಲಾಗಿದೆ. ಆದರೆ, ಮುಂದೆ ಹೋದಾಗ ಮೂರ‌್ನಾಲ್ಕು ಕಟ್ಟಡಗಳು ಕಾಣಿಸಿಕೊಳ್ಳುವುದರಿಂದ ಮ್ಯೂಸಿಯಂ ಯಾವುದು ಎಂದು ತತ್‌ಕ್ಷಣಕ್ಕೆ ಗೊತ್ತೇ ಆಗುವುದಿಲ್ಲ. ಸುಮಾರು ಮುಕ್ಕಾಲು ಎಕರೆ ವ್ಯಾಪ್ತಿಯಲ್ಲಿರುವ ಕಟ್ಟಡದಲ್ಲಿ ಎಲ್ಲೂ ಮ್ಯೂಸಿಯಂ ಎಂದು ಸೂಚಿಸುವ ನಾಮಲಕವಾಗಲೀ, ಬರೆದಿರುವ ಕುರುಹುಗಳಾಗಲೀ ಇಲ್ಲ. ಮ್ಯೂಸಿಯಂ ಆವರಣದಲ್ಲಿ ಹೂವಿನ ಗಿಡಗಳು ಒಣಗಿ ಹೋಗಿವೆ.
ವೀಕ್ಷಕರ ಕೊರತೆ
ಶ್ರೀಮಂತಿ ಬಾಯಿ ಮ್ಯೂಸಿಯಂ ಇರುವ ಬಗ್ಗೆ ಬಹುತೇಕ ಜನರಿಗೆ ತಿಳಿದಿಲ್ಲ. ಅಲ್ಲದೆ, ಈ ಮ್ಯೂಸಿಯಂಗೆ ಪ್ರವಾಸಿಗರನ್ನು ಆಕರ್ಷಿಸಬಲ್ಲ ಅಭಿವೃದ್ಧಿ ಕೆಲಸಗಳು ಆಗದೆ ಇರುವುದರಿಂದ ಇಲ್ಲಿಗೆ ಪ್ರವಾಸಿಗರು ಮಾತ್ರವಲ್ಲ, ಸ್ಥಳೀಯರೂ ಬರುತ್ತಿಲ್ಲ. ಐತಿಹಾಸಿಕ ಘಟನೆಗಳಿಗೆ ಸಂಬಂಧಿಸಿದಂಥ ಕಾರ್ಯಕ್ರಮಗಳೂ ನಡೆಯುವುದಿಲ್ಲ. ಕೆಲವೊಮ್ಮೆ ನಾಣ್ಯ, ಅಂಚೆ ಚೀಟಿ ಪ್ರದರ್ಶನದಂಥ ಕಾರ್ಯಕ್ರಮಗಳು ನಡೆಯುತ್ತವೆಯಾದರೂ, ಅದಕ್ಕೂ ಜನ ಬರುವುದು ವಿರಳ.
ಅಭಿವೃದ್ಧಿಯಾದರೆ ಆಕರ್ಷಣೆ ಮ್ಯೂಸಿಯಂನಲ್ಲಿ ಪುರಾತನ ಕಡತಗಳು, ಕ್ರಿ.ಶ. 1624ರ ತಾಮ್ರಪಟ ಶಾಸನ, ಪುರಾತನ ನಾಣ್ಯ ಸಂಗ್ರಹ, 11, 16ನೇ ಶತಮಾನದ ಕಂಚು, ತಾಮ್ರದಲ್ಲಿ ಮಾಡಿದ ದೇವರ ವಿಗ್ರಹಗಳು, 16ನೇ ಶತಮಾನದ ಅಡುಗೆ ಪರಿಕರಗಳು, ನೂತನ ಶಿಲಾಯುಗ, ಆದಿ ಶಿಲಾಯುಗದ ಪಳೆಯುಳಿಕೆಗಳು, ತಾಳೆಗರಿ ಗ್ರಂಥ, ಆಗಿನ ಸಂದರ್ಭ ಯುದ್ಧಕ್ಕೆ ಬಳಸುತ್ತಿದ್ದ ಫಿರಂಗಿ, ಕೋವಿ, ಆಯುಧಗಳು, 19ನೇ ಶತಮಾನದ ದೀಪಸ್ತಂಭ, ವೀಣೆ, ನಗಾರಿ ಸೇರಿದಂತೆ ಪುರಾತನ ಕಾಲದ ಹಲವಾರು ವಸ್ತುಗಳು ಈ ವಸ್ತು ಸಂಗ್ರಹಾಲಯದಲ್ಲಿವೆ. ಹೆಚ್ಚಿನ ಜನರನ್ನು ಆಕರ್ಷಿಸಲು ಪುರಾತತ್ವ ಇಲಾಖೆ ಇದರ ಅಭಿವೃದ್ಧಿಗೆ ಗಮನ ಕೊಡುವುದು ಅವಶ್ಯ.
ಬಿಜೈಯಲ್ಲಿರುವ ಶ್ರೀಮಂತಿ ಬಾಯಿ ಮ್ಯೂಸಿಯಂ 1960ರ ಮೇ ತಿಂಗಳಿನಲ್ಲಿ ಆರಂಭಗೊಂಡಿದ್ದು, 60 ವರ್ಷದ ಸಂಭ್ರಮದಲ್ಲಿದೆ. ಇದಕ್ಕಾಗಿ ವಿಶೇಷ ಕಾರ್ಯಕ್ರಮಕ್ಕೆ ಯೋಜನೆ ರೂಪಿಸಲಾಗಿದೆ. ಪ್ರಸ್ತುತ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆ ಇದೆ. ಮ್ಯೂಸಿಯಂ ಪ್ರಚಾರಕ್ಕೆ ರೈಲ್ವೆ, ಬಸ್ ನಿಲ್ದಾಣ ಹಾಗೂ ಹೆಚ್ಚಿನ ಜನ ವೀಕ್ಷಣೆ ಮಾಡುವಲ್ಲಿ ಬೃಹತ್ ಫಲಕಗಳನ್ನು ಅಳವಡಿಸಲು ಸಿದ್ಧತೆ ನಡೆಸಲಾಗಿದೆ. ಧನಲಕ್ಷ್ಮೀ ಅಮ್ಮಾಳ್, ವಸ್ತು ಸಂಗ್ರಹಾಲಯ ಅಧಿಕಾರಿ