ಜನೌಷಧಿ ಕೇಂದ್ರಗಳನ್ನುವಿಸ್ತರಿಸಲು ಸರ್ಕಾರದ ಚಿಂತನೆ: ಡಾ.ಸುಧಾಕರ್

Dr k sudhakar
Published on

ಚಿಕ್ಕಮಗಳೂರು: ಜನೌಷಧಿ ಮಾರಾಟ ಕೇಂದ್ರಗಳನ್ನು ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಟ್ಟಕ್ಕೂ ವಿಸ್ತರಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಂದೆ ಎಲ್ಲ ಕಡೆಗಳಲ್ಲಿ ಜನೌಷಧಿ ಕೇಂದ್ರಗಳ ಸೌಲಭ್ಯ ದೊರಕುವಂತೆ ಕ್ರಮ ಕೈಗೊಳ್ಳಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸಾದ ಈ ಯೋಜನೆಯಡಿ ಬಡವರಿಗೂ ಗುಣಮಟ್ಟದ ಔಷಧಿ ಸಿಗುವಂತೆ ಮಾಡಲಿದ್ದು, ಪ್ರಧಾನಿಯವರ ಆಶಯ ಕಾರ್ಯಗತಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಖಾಸಗಿ ಸಂಸ್ಥೆಗಳ ಔಷಧಿಗಳನ್ನು ಜನೌಷಧಿ ಕೇಂದ್ರಗಳಲ್ಲಿ ಮಾರಲಾಗುತ್ತಿದೆ. ಎಲ್ಲ ರೀತಿಯ ಔಷಧಿ ಲಭ್ಯವಿಲ್ಲ ಎನ್ನುವ ದೂರುಗಳಿದ್ದು, ಇವುಗಳ ಬಗ್ಗೆ ಗಮನ ಹರಿಸಲಾಗುತ್ತಿದೆ ಎಂದರು.

ಖಾಸಗಿ ಔಷಧಿ ಅಂಗಡಿಗಳಿಗೆ ಅಂತರ ನಿಗದಿ

ಸರ್ಕಾರಿ ಆಸ್ಪತ್ರೆಗಳಿಂದ ನಗರ ಪ್ರದೇಶಗಳಲ್ಲಿ 100 ಮೀಟರ್ ಹಾಗೂ ಗ್ರಾಮೀಣ ಪ್ರದೇಶದಲ್ಲಿ 200 ಮೀಟರ್ ಅಂತರದ ವ್ಯಾಪ್ತಿಯೊಳಗೆ ಯಾವುದೇ ಖಾಸಗಿ ಔಷಧಿ ಕೇಂದ್ರಗಳನ್ನು ತೆರೆಯಲು ಪರವಾನಗಿ ನೀಡಬಾರದು ಎಂಬ ನಿಯಮ ಜಾರಿಗೆ ತರಲಾಗುವುದು, ಈ ವ್ಯಾಪ್ತಿಯೊಳಗೆ ಈಗಾಗಲೇ ಇರುವ ಔಷಧಿ ಅಂಗಡಿಗಳ ಬಗ್ಗೆ ಯಾವ ರೀತಿ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಮುಂದೆ ತೀರ್ಮಾನಿಸಲಾಗುವುದು ಎಂದರು.

ರಾಜ್ಯದಲ್ಲಿ 2500ಕ್ಕೂ ಹೆಚ್ಚು ವೈದ್ಯರ ನೇರ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು ನವೆಂಬರ್ ಅಂತ್ಯಕ್ಕೆ ಅದು ಪೂರ್ಣಗೊಳ್ಳಲಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯಿಂದ 750 ಹಾಗೂ ಆರೋಗ್ಯ ಇಲಾಖೆಯಿಂದ 1400 ಮಂದಿ ಹಿರಿಯ ಗೃಹ ವೈದ್ಯರನ್ನು ನೇಮಕ ಮಾಡಿಕೊಳ್ಳಲಿದ್ದು, ಸ್ನಾತಕೋತ್ತರ ವೈದ್ಯಕೀಯ ಪದವಿ ಪಡೆದ ಬಳಿಕ ಈ ವೈದ್ಯರು ಸರ್ಕಾರ ನಿಯೋಜಿಸಿದ ಸ್ಥಳದಲ್ಲಿ ಕಡ್ಡಾಯವಾಗಿ ಒಂದು ವರ್ಷ ಕಾರ್ಯ ನಿರ್ವಹಿಸಬೇಕು. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಪದವಿ ಪಡೆದವರಿಗೂ ಇದ್ದು ಕಡ್ಡಾಯ ಎಂದರು.

ಪಿಎಚ್‍ಸಿಗಳ ಹಂತದಲ್ಲೇ ಎಲ್ಲ ಪರೀಕ್ಷೆ

ರಾಜ್ಯದಲ್ಲಿ ಸಾರ್ವಜನಿಕರಿಗೆ ಯಾವುದೇ ಕಾರಣಕ್ಕೆ ವೈದ್ಯರ ಕೊರತೆ ಆಗಬಾರದು. ಜತೆಗೆ ಎಲ್ಲ ರೀತಿಯ ವೈದ್ಯಕೀಯ ಪರೀಕ್ಷೆಗಳು ಪ್ರಾಥಮಿಕ ಆರೋಗ್ಯ ಕೇಂದ್ರದ ಹಂತದಲ್ಲೇ ನಡೆಯಬೇಕು. ಸರ್ಕಾರಿ ಆರೋಗ್ಯ ವ್ಯವಸ್ಥೆಯಲ್ಲಿ ಶುಚಿತ್ವ ಮತ್ತು ಗುಣಮಟ್ಟ ಸಾಲದೆಂದು ಜನಸಾಮಾನ್ಯರಲ್ಲಿರುವ ಅನಿಸಿಕೆಯನ್ನು ಅಳಿಸಿ, ಖಾಸಗಿಯವರಂತೆ ಉತ್ತಮ ಸೇವೆ ನೀಡುವ ಹೊಸ ಭರವಸೆ ಮೂಡಿಸುವ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ದೃಢ ಸಂಕಲ್ಪ ಸ್ವೀಕಾರ ಮಾಡಿದೆ. ಪ್ರತಿಯೊಬ್ಬರಿಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಹೇಳಿದರು.

ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಗಳಲ್ಲಿ ವ್ಯತಿರಿಕ್ತ ಫಲಿತಾಂಶ ಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಸೋಂಕಿನ ಲಕ್ಷಣಗಳಿದ್ದವರ ತಪಾಸಣೆಯಲ್ಲಿ ನಿಖರತೆ ಹೆಚ್ಚಿರುತ್ತದೆ. ಸೋಂಕಿನ ಲಕ್ಷಣವೇ ಇಲ್ಲದವರಲ್ಲಿ ಫಾಲ್ಸ್ ಪಾಸಿಟಿವ್, ಕೆಲವೊಮ್ಮೆ ಫಾಲ್ಸ್ ನೆಗೆಟಿವ್ ಸಹ ತೋರಿಸುತ್ತದೆ. ಇವು ಗೋಲ್ಡ್ ಸ್ಟ್ಯಾಂಡರ್ಡ್ ಟೆಸ್ಟ್ ಗಳಲ್ಲ. ಹೀಗಾಗಿ ಅಂಥ ಪ್ರಕರಣಗಳನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಮತ್ತೊಮ್ಮೆ ಆರ್‍ಟಿಪಿಸಿಆರ್ ಟೆಸ್ಟ್ ಮಾಡಲಾಗುತ್ತದೆ. ಹೀಗಾಗಿ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಗಳನ್ನು ಕಡಿಮೆ ಮಾಡಲಾಗಿದ್ದು, ಈಗ ಈ ತಪಾಸಣೆಯ ಪ್ರಮಾಣ ಶೇ.80-20ರಷ್ಟಿದೆ. ಮುಂದೆ ಈ ಪ್ರಮಾಣವನ್ನು ಇನ್ನಷ್ಟು ತಗ್ಗಿಸಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net