ಬಲಾಢ್ಯರಿಂದ ಸರ್ಕಾರಿ ಜಾಗ ಕಬಳಿಕೆ: ಸದನದಲ್ಲಿ ಶಾಸಕ ರವಿಕುಮಾರ್ ಗಣಿಗ ಚರ್ಚೆ

Ravikumar Ganiga
Published on

ಮಂಡ್ಯ: ಜಿಲ್ಲೆಯಲ್ಲಿ ಬಡಜನರಿಗೆ ಹಂಚಿಕೆ ಮಾಡಲು ಅವಶ್ಯಕವಿರುವ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಹಾಗೂ ಇದರಿಂದಾಗುತ್ತಿರುವ ಸಮಸ್ಯೆ ಕುರಿತು ಶಾಸಕ ರವಿಕುಮಾರ್ ಗಣಿಗ ಸದನದಲ್ಲಿ ರಾಜ್ಯಸರ್ಕಾರದ ಗಮನ ಸೆಳೆದಿದ್ದಾರೆ.

ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿರುವ ಅವರು, ಸರ್ಕಾರಿ ಜಾಗವನ್ನು ಬಲಾಢ್ಯರು ಕಬಳಿಕೆ ಮಾಡಿಕೊಂಡಿದ್ದಾರೆ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದರೆ. ಆದರೆ ಇದರ ಪರಿಣಾಮ ಬಡ ಜನರು ನಿವೇಶನವಿಲ್ಲದೆ ಪರದಾಡುವಂತಾಗಿದೆ. ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಒತ್ತಾಯಿಸಿದ್ದಾರೆ.

ಇದಕ್ಕೆ ಉತ್ತರಿಸಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ, ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಜಾಗಗಳ ರಕ್ಷಣೆ ಕ್ರಮ ವಹಿಸಲಾಗಿದೆ. ಮೊಬೈಲ್ ಆ್ಯಪ್ ಮೂಲಕ ಖಾಲಿ ಜಾಗಗಳ ಜಿಪಿಎಸ್ ಲೋಕೇಷನ್ ಮಾರ್ಕ್ ಮಾಡಿ ಗಡಿ ನಿಗದಿ ಮಾಡಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಜಾಗಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲು ಬೀಟ್ ಸಿಸ್ಟ್‌ಂ ಜಾರಿ ಮಾಡಲಾಗಿದೆ. ಒತ್ತುವರಿಯಾಗಿರುವುದು ಕಂಡುಬಂದರೆ ಕೂಡಲೇ ಸಂಬಂಧಪಟ್ಟ ತಹಸೀಲ್ದಾರ್ ತೆರವುಗೊಳಿಸಬೇಕು ಎಂದಿದ್ದಾರೆ.

ಅಂತೆಯೇ ಬೀಟ್ ಸಿಸ್ಟ್‌ಂ ಮೊಬೈಲ್ ಲೋಕೇಷನ್ ಆಧಾರದ ಮೇಲೆ ಕಾರ್ಯ ನಿರ್ವಹಿಸುವುದರಿಂದ ಅಧಿಕಾರಿಗಳು ಕಡ್ಡಾಯ ಸ್ಥಳಕ್ಕೆ ತೆರಳಬೇಕು. ನಿರ್ಲಕ್ಷೃ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಜಾಗಗಳನ್ನು ಕಬಳಿಸುವಲ್ಲಿ ಅಧಿಕಾರಿಗಳು ಶಾಮೀಲು ಆಗುತ್ತಿರುವುದು ದುರ್ದೈವದ ಸಂಗತಿ. ಈಗಿರುವ ಕಾನೂನುಗಳನ್ನು ಸರಿಯಾಗಿ ಪಾಲನೆ ಮಾಡಿದರೆ ಜಾಗಗಳನ್ನು ರಕ್ಷಿಸಿಕೊಳ್ಳಬಹುದು ಎಂದು ಉತ್ತರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net