

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಕೋಟ್ಯಂತರ ರೂ. ಹಗರಣವನ್ನು ಮುಚ್ಚಿ ಹಾಕುವ ಎಲ್ಲ ರೀತಿಯ ಪ್ರಯತ್ನಗಳು ಸರ್ಕಾರದಿಂದಲೇ ನಡೆದಿದೆ. ಈ ಬಗ್ಗೆ ಬಿಜೆಪಿಯಿಂದ ಹೋರಾಟ ಮುಂದುವರಿಸಲಾಗುವುದು ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಗರಣದಲ್ಲಿ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯಲಾಗಿದೆ. ಆದರೆ, ಪ್ರಮುಖರ ಮೇಲೆ ಕಾನೂನು ಕ್ರಮ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದರು.
ಪಕ್ಷದ ಮೇಲೆ ಕಾಂಗ್ರೆಸ್ ಶಾಸಕರಿಗೆ ನಿಷ್ಠೆ ಉಳಿದಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ಯಾವುದೇ ಸಂದರ್ಭದಲ್ಲಿ ಪತನ ಆಗಬಹುದು. ರಾಜ್ಯ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಟೀಕೆ ಮಾಡುತ್ತಿದೆ. ಅಭಿವೃದ್ಧಿ ಕೆಲಸ, ಭಷ್ಟಾಚಾರ ನಿಯಂತ್ರಣ ಮಾಡುವುದನ್ನು ಬಿಟ್ಟು ಮುಖ್ಯಮಂತ್ರಿ ಬದಲಾವಣೆ, ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ. ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಇಲ್ಲವಾಗಿದೆ ಎಂದು ಆರೋಪಿಸಿದರು.
ಸಂಘರ್ಷ ಉಂಟಾಗಲಿದೆ
ಒಂಬತ್ತನೇ ತರಗತಿ ಪಠ್ಯದಲ್ಲಿ ವೀರಶೈವ ಪದ ತೆಗೆದರೆ ಅದರಿಂದ ಏನು ಪರಿಣಾಮ ಉಂಟಾಗುತ್ತದೆ, ಸಮಾಜದಲ್ಲಿ ಯಾವ ರೀತಿಯ ಸಂಘರ್ಷಗಳು ಉಂಟಾಗುತ್ತವೆ ಎಂಬುದನ್ನು ಲೆಕ್ಕಿಸದೇ ಯಾರೋ ಸಲಹೆ ಕೊಟ್ಟರೂ ಎಂದು ಬೇಕಾಬಿಟ್ಟಿಯಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ಧಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.