

ಸಿರಗುಪ್ಪ: ಕೂಸಿನ ಮನೆಯಲ್ಲಿ ಮಕ್ಕಳನ್ನು ಆರೈಕೆದಾರರು ಉತ್ತಮವಾಗಿ ನೋಡಿಕೊಳ್ಳಬೇಕು ಎಂದು ತಾಪಂನ ನರೇಗಾ ಯೋಜನೆಯ ಮಾಹಿತಿ ಮತ್ತು ಸಂಯೋಜನಾಧಿಕಾರಿ ಸುರೇಶ್ ಹೇಳಿದರು.
ನಗರದ ತಾಪಂ ಸಭಾಂಗಣದಲ್ಲಿ ಕೂಸಿನ ಮನೆ ಮಕ್ಕಳ ಆರೈಕೆದಾರರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಕೂಲಿ ಕಾರ್ಮಿಕರ ಮಕ್ಕಳ ಲಾಲನೆ, ಪಾಲನೆಗಾಗಿ ಸರ್ಕಾರ ಕೂಸಿನ ಮನೆ ಯೋಜನೆ ಆರಂಭಿಸಿದೆ. ಮಕ್ಕಳಿಗಾಗಿ ಮಕ್ಕಳ ಸ್ನೇಹಿ ಹಾಗೂ ವಯಸ್ಕರ ಶೌಚಗೃಹ ಪ್ರತ್ಯೇಕವಾಗಿರಲಿದೆ. ಮಕ್ಕಳಿಗೆ ಆಟವಾಡಲು ಆಟಿಕೆ ವಸ್ತುಗಳು, ವಿಶೇಷ ಚೇತನ ಮಕ್ಕಳಿಗಾಗಿ ಇಳಿಜಾರು ಮತ್ತು ಕೈಹಳಿಗಳ ವ್ಯವಸ್ಥೆ ಇದ್ದು, ತಾಲೂಕಿನ 25 ಗ್ರಾಪಂಗಳ ವ್ಯಾಪ್ತಿಯಲ್ಲಿ ಕೂಸಿನ ಮನೆ ಕಾರ್ಯಾರಂಭ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಕಾರ್ಮಿಕರ ಮೂರು ವರ್ಷದ ಒಳಗಿನ ಮಕ್ಕಳ ರಕ್ಷಣೆಗಾಗಿ ನರೇಗಾ ಯೋಜನೆಯಡಿ ಕೂಸಿನ ಮನೆ ನಿರ್ಮಾಣ ಮಾಡಲಾಗಿದೆ. ಪ್ರತಿ ಪಂಚಾಯಿತಿ ವ್ಯಾಪ್ತಿಯ ಕೂಸಿನ ಮನೆಯಲ್ಲಿ ನಾಲ್ಕು ಜನ ಕಾರ್ಯನಿರ್ವಹಿಸಬೇಕಿದ್ದು, ಪ್ರತಿಯೊಬ್ಬರೂ ಸರ್ಕಾರದ ಸಲಹೆ, ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮಕ್ಕಳಿಗೆ ಉತ್ತಮವಾದ ಆಹಾರ ಧಾನ್ಯಗಳಿಂದ ತಯಾರಿಸಿದ ಪೌಷ್ಟಿಕ ಆಹಾರ ಪೂರೈಕೆ ಮಾಡಲಾಗುತ್ತದೆ. ಮಕ್ಕಳಿಗೆ ಆಹಾರ ತಯಾರಿಸುವಾಗ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು. ತಾಪಂ ಅಧಿಕಾರಿ ಬಸವರಾಜ್ ಮಾತನಾಡಿದರು.