

ಮೈಸೂರು: ರಾಜ್ಯದಲ್ಲಿ ಖಜಾನೆ ಖಾಲಿಯಾಗಿ ಅಭಿವೃದ್ಧಿ ಕಾರ್ಯಕ್ಕೆ ಹಣವಿಲ್ಲದಂತಾಗಿದೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಟೀಕಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ರಸ್ತೆಗಳ ಹಳ್ಳ, ಗುಂಡಿ ಮುಚ್ಚಲು ಹಣವಿಲ್ಲ. ಡೆಂೆ ತಡೆಯಲು ಯಾವುದೇ ಕ್ರಮಕೈಗೊಂಡಿಲ್ಲ. ಖಜಾನೆ ಸಂಪೂರ್ಣ ಖಾಲಿ ಇದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಇಲ್ಲದೆ ಸಾಲವನ್ನು ದುಪ್ಪಟ್ಟು ಮಾಡುವ ಸನ್ನಿವೇಶ ನಿರ್ಮಾಣ ಆಗಿದೆ. ಅಭಿವೃದ್ಧಿ ಕೆಲಸ ಕುಂಠಿತವಾಗಿದೆ ಎಂದು ದೂರಿದರು.
ಮೈಸೂರು ಜಿಲ್ಲೆಯಲ್ಲಿ ಸಿದ್ದರಾಮಯ್ಯ ಪ್ರತಿಷ್ಠೆ ಚುನಾವಣೆಗೆ ಮಾತ್ರ ಸೀಮಿತವಾಗಿದೆ. ಆಡಳಿತವನ್ನು ಮಾಡುವಾಗ ಪ್ರತಿಷ್ಠೆಯನ್ನು ಮರೆತು ಅಭಿವೃದ್ಧಿಗೆ ಒತ್ತು ನೀಡಬೇಕು. ಆದರೆ ಭ್ರಷ್ಟಾಚಾರದಲ್ಲಿ ತೊಡಗಿರುವುದರಿಂದ ತಕ್ಷಣವೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಮೈಸೂರಿನ ಮುಡಾ ಹಗರಣ ಇಡೀ ರಾಜ್ಯದ ಗಮನ ಸೆಳೆದಿದೆ. ಅನಾಮಧೇಯ ಪತ್ರವನ್ನು ಗಮನಿಸಿ ವಿಚಾರಣೆ ಮಾಡಿದಾಗ 65 ನಿವೇಶನಗಳನ್ನು ಒಬ್ಬರಿಗೆ ಬರೆದು ಕೊಡಲಾಗಿದೆ. ಪರಿಹಾರವನ್ನು ಕೊಟ್ಟಿಲ್ಲವೆಂದು ಹೇಳಿ ನಿವೇಶನ ಕೊಟ್ಟಿರುವುದು ದೊಡ್ಡ ಹಗರಣವಾಗಿದೆ ಎಂದು ದೂರಿದರು.
ರಾಜ್ಯದ ರಾಜ್ಯಪಾಲರು, ಮುಖ್ಯ ನ್ಯಾಯಮೂರ್ತಿ, ಮುಖ್ಯ ಕಾರ್ಯದರ್ಶಿ ಅವರಿಗೆ ದೂರು ನೀಡಲಾಗಿದೆ. ಪ್ರತಿಭಟನೆ ನಾಗರಿಕ ಹಕ್ಕಾದರೂ ಸರ್ಕಾರ ನಿರ್ಬಂಧ. ಸರ್ವಾಧಿಕಾರಿಯ ಮತ್ತೊಂದು ಮುಖವಾಡ ಅಂದರೆ ಸಿದ್ದರಾಮಯ್ಯ ಆಗಿದ್ದಾರೆ ಎಂದು ಟೀಕಿಸಿದರು.
ಮೈಸೂರು ನಗರಾಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ, ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದರೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಒಬ್ಬ ರಾಜ್ಯದ ಮುಖ್ಯಮಂತ್ರಿಯಾಗಿ ಕಳ್ಳಕಾಕರರ ಪರವಾಗಿ ನಿಲ್ಲಬಾರದು. ಚೇಲಾ, ಪುಢಾರಿಗಳಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರೂ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ಮಾಡಲಾಗಿದೆ ಎಂದು ದೂರಿದರು.
ಮಾಜಿ ಸಚಿವ ಎನ್.ಮಹೇಶ್ ಮಾತನಾಡಿ, ದಲಿತರ ಜಮೀನನ್ನು ಕಸಿದುಕೊಂಡಿರುವ ಸಿದ್ದರಾಮಯ್ಯ ಸಂವಿಧಾನ, ಪ್ರಜಾಪ್ರಭುತ್ವ ಪರವಾಗಿಲ್ಲ. ಹೋರಾಟವನ್ನು ಹತ್ತಿಕ್ಕಲು ಕಾರ್ಯಕರ್ತರನ್ನು ಅಲ್ಲಲ್ಲಿ ಬಂಧಿಸಿರುವುದು ಕಾನೂನುಬಾಹಿರವಾಗಿದೆ. ದಲಿತರ ಬಗ್ಗೆ ಮಾತನಾಡುವ ನೈತಿಕತೆ ಅವರಿಗೆ ಇಲ್ಲ. ಲೂಟಿ ಮಾಡಿದ ಮೇಲೆ ಈಗ ಸ್ವಚ್ಛ ಮಾಡುವ ಮಾತನ್ನಾಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಹೇಳಿದರು.
ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್.ರಘು ಕೌಟಿಲ್ಯ ಮಾತನಾಡಿ, ಬಡವರಿಗೆ ನಿವೇಶನ ಹಂಚದೆ ಲೂಟಿ ಮಾಡಲು ಕಾರಣವಾಗಿರುವ ಸಿದ್ದರಾಮಯ್ಯ ಅವರೇ ಪಿತಾಮಹ ಆಗಿದ್ದಾರೆ. ಕಾಂಗ್ರೆಸ್ ನಾಯಕರು ಮಾಡಿರುವ ಲೂಟಿಯನ್ನು ಅವರು ಸಮರ್ಥನೆ ಮಾಡಿಕೊಳ್ಳಲು ಮುಂದಾಗಿರುವುದು ಹಾಸ್ಯಾಸ್ಪದ ಆಗಿದೆ. ಐದು ಸಾವಿರ ನಿವೇಶನಗಳನ್ನು ಹಂಚಿ ಸಾವಿರಾರು ಕೋಟಿ ರೂ. ಭ್ರಷ್ಟಾಚಾರ ಮಾಡಲಾಗಿದೆ ಎಂದು ಆರೋಪಿಸಿದರು.