

ಹರೀಶ್ ಮೋಟುಕಾನ, ಮಂಗಳೂರು
ಸುಸಜ್ಜಿತ ವರ್ಕ್‌ಶಾಪ್, ಮೂರು ಜಿಲ್ಲೆಗಳ ವ್ಯಾಪ್ತಿ, ಆರಂಭಗೊಂಡು 17 ವರ್ಷಗಳೇ ಕಳೆದವು. ಇದುವರೆಗೆ ಮೆಕ್ಯಾನಿಕ್ ನೇಮಕ ಆಗಿಲ್ಲ. ಪರಿಣಾಮ, ಈ ಸರ್ಕಾರಿ ಗ್ಯಾರೇಜ್ ಒಂದೂವರೆ ದಶಕದಿಂದ ಬಂದ್ ಆಗಿದೆ.
ನಗರದ ಮೇರಿಹಿಲ್ ಹೆಲಿಪ್ಯಾಡ್ ರಸ್ತೆ ಬದಿಯಲ್ಲಿ ರಾಜ್ಯ ಸರ್ಕಾರದ ಕೇಂದ್ರ ಯಾಂತ್ರಿಕ ಸಂಸ್ಥೆ (ಸೆಂಟ್ರಲ್ ಮೆಕ್ಯಾನಿಕಲ್ ಆರ್ಗನೈಸೇಶನ್) 2003ರಲ್ಲಿ ನಿರ್ಮಿಸಿದ ವರ್ಕ್‌ಶಾಪ್‌ನ ಚಿತ್ರಣವಿದು.
ದ.ಕ, ಉಡುಪಿ ಮತ್ತು ಕೊಡಗು ಜಿಲ್ಲೆಗಳ ವ್ಯಾಪ್ತಿಯ ಬೃಹತ್ ನೀರಾವರಿ ಹಾಗೂ ಲೋಕೋಪಯೋಗಿ ಇಲಾಖೆ ಲಾರಿ, ಟಿಪ್ಪರ್, ರೋಡ್ ರೋಲರ್, ಜೀಪ್ ಮುಂತಾದ ವಾಹನಗಳ ದುರಸ್ತಿಗೆ ಈ ವರ್ಕ್‌ಶಾಪ್ ತೆರೆಯಲಾಗಿತ್ತು. ಆದರೆ ಉದ್ದೇಶ ಈಡೇರಿಲ್ಲ. ವರ್ಕ್‌ಶಾಪ್‌ನ ಒಳಗಡೆ ಈಗ ಏನಿದೆ ಎಂದು ಪರಿಶೀಲಿಸಿದರೆ ಅಲ್ಲಿರುವುದು ಬೋರ್ಡ್ ಮತ್ತು ಕಾವಲುಗಾರ ಮಾತ್ರ. ಕೋಣೆಯೊಳಗಿನ ಗೋಡೆಯಲ್ಲಿ ಉದ್ಘಾಟನೆ ಸಮಾರಂಭದ ಫೋಟೋಗಳಿವೆ. ಆರಂಭದ ದಿನಗಳಲ್ಲಿ ಲೋಕೋಪಯೋಗಿ ಇಲಾಖೆಯ ಕೆಲವು ವಾಹನಗಳನ್ನು ದುರಸ್ತಿ ಮಾಡಿದ ಫೋಟೋಗಳಿವೆ. ಒಂದು ಕೋಣೆಯಲ್ಲಿ ಕಾವಲುಗಾರನ ಕುಟುಂಬ ವಾಸವಿದೆ. ಕೆಲವೊಮ್ಮೆ ಅಧಿಕಾರಿಗಳು ತಮ್ಮ ವಾಹನವನ್ನು ಪಾರ್ಕ್ ಮಾಡಿ ಹೋಗುತ್ತಾರೆ. ಸದಾ ಬಂದ್: ವರ್ಕ್‌ಶಾಪ್ ನಿರ್ಮಿಸಿದ ಇಲಾಖೆ ಬಳಿಕ ಇಲ್ಲಿಗೆ ಮೆಕ್ಯಾನಿಕ್ ಸೇರಿದಂತೆ ಯಾವುದೇ ಸಿಬ್ಬಂದಿ ನೇಮಕ ಮಾಡುವ ಗೋಜಿಗೆ ಹೋಗಿಲ್ಲ. ಮೆಕ್ಯಾನಿಕ್ ಇಲ್ಲದ ಮೇಲೆ ದುರಸ್ತಿಗೆ ಇಲಾಖೆಯ ವಾಹನ ಬಂದರೆ ಏನು ಪ್ರಯೋಜನ? ಒಂದೂವರೆ ದಶಕದಿಂದ ಈ ಗ್ಯಾರೇಜ್‌ನ ಗೇಟ್ ತೆರೆದಿಲ್ಲ. ಇಲ್ಲಿ ಒಂದು ಸರ್ಕಾರಿ ಸಂಸ್ಥೆಯ ಗ್ಯಾರೇಜ್ ಇದೆ ಎನ್ನುವುದು ಕೂಡ ಹೆಚ್ಚಿನವರಿಗೆ ತಿಳಿದಿಲ್ಲ. ಕಾರಣ ಏನು ?: ದ.ಕ.ಜಿಲ್ಲೆಯಲ್ಲಿ ಬೃಹತ್ ನೀರಾವರಿ ಇಲಾಖೆ ಯಾವುದೇ ಯೋಜನೆಗಳಿಲ್ಲ. ಇನ್ನು ಲೋಕೋಪಯೋಗಿ ಇಲಾಖೆಯ ಓಬಿರಾಯನ ಕಾಲದ ವಾಹನಗಳನ್ನು ಗುತ್ತಿಗೆದಾರರು ಬಾಡಿಗೆಗೆ ಪಡೆಯುತ್ತಿಲ್ಲ. ಇಲಾಖೆಯಲ್ಲಿ ವಾಹನಗಳ ಸಂಖ್ಯೆ ಕಡಿಮೆಯಾಗಿದೆ. ಇರುವ ವಾಹನಗಳನ್ನು ಖಾಸಗಿ ಗ್ಯಾರೇಜ್‌ಗಳಲ್ಲಿ ದುರಸ್ತಿ ಮಾಡಲಾಗುತ್ತದೆ. ಹೀಗಿರುವಾಗ ಮಂಗಳೂರಿನಲ್ಲಿ ವರ್ಕ್‌ಶಾಪ್ ನಿರ್ಮಿಸಿದ ಉದ್ದೇಶದ ಬಗ್ಗೆ ಯಾರಲ್ಲೂ ಉತ್ತರವಿಲ್ಲ.
ಗ್ಯಾರೇಜ್‌ಗೆ ಮೆಕ್ಯಾನಿಕ್ ನೇಮಕ ನಡೆದಿಲ್ಲ. ಇಲಾಖೆಯಲ್ಲಿ ಮೆಕ್ಯಾನಿಕ್ ನೇಮಕಾತಿಯೇ ಆಗುತ್ತಿಲ್ಲ. ಹಾಗಾಗಿ ಹಲವು ವರ್ಷಗಳಿಂದ ಈ ಗ್ಯಾರೇಜ್ ಬಂದ್ ಆಗಿದೆ. ಮೆಕ್ಯಾನಿಕ್ ನೇಮಕ ಮಾಡಿ ಗ್ಯಾರೇಜನ್ನು ಮತ್ತೆ ಆರಂಭಿಸುವ ಯೋಜನೆ ಇದೆ. ಇದಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯ ಇಲಾಖೆ ವಾಹನಗಳನ್ನು ಖಾಸಗಿ ಗ್ಯಾರೇಜ್‌ಗಳಲ್ಲಿ ದುರಸ್ತಿ ಮಾಡಲಾಗುತ್ತಿದೆ. - ದೇವಿಪ್ರಸಾದ್ ಜೂನಿಯರ್ ಇಂಜಿನಿಯರ್, ಕೇಂದ್ರ ಯಾಂತ್ರಿಕ ಸಂಸ್ಥೆ