ಅಭಿವೃದ್ಧಿಯಲ್ಲಿ ಹಿಂದುಳಿದ ಗಡಿ ತಾಲೂಕು, ಚಿಂಚೋಳಿಯತ್ತ ಚಿತ್ತ ಹರಿಸುತ್ತಾ ಸರ್ಕಾರ?

PH 05
Published on

ಶಿವರಾಜ ವಾಲಿ ಚಿಂಚೋಳಿ
ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ಜನತಾ ದರ್ಶನ ಹಮ್ಮಿಕೊಂಡಿದ್ದು, ಗಡಿ ತಾಲೂಕು ಚಿಂಚೋಳಿಯಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯಲ್ಲಿ ಜನತಾ ದರ್ಶನ ನಡೆಯಲಿದೆ.

ನಿಜಾಮನ ಕಾಲದಿಂದಲೂ ತಾಲೂಕು ಕೇಂದ್ರವಾಗಿರುವ ಚಿಂಚೋಳಿ 2011ರ ಜನಗಣತಿ ಪ್ರಕಾರ 2,54,287 ಲಕ್ಷ ಜನಸಂಖ್ಯೆ ಹೊಂದಿದೆ. 119 ಹಳ್ಳಿ, 78 ತಾಂಡಾ, 14 ಜನವಸತಿಯಿಲ್ಲದ ಹಳ್ಳಿ, 27 ಗ್ರಾಮ ಪಂಚಾಯಿತಿಗಳಿವೆ. ಮುಖ್ಯಮಂತ್ರಿ, ಸಚಿವರನ್ನು ನೀಡಿದ ಕ್ಷೇತ್ರವಾದರೂ ಜನಪ್ರತಿನಿಧಿಗಳ ನಿರ್ಲಕ್ಷÈ ಮತ್ತು ಅಧಿಕಾರಿ ವರ್ಗದ ನಿಷ್ಕಾಳಜಿಯಿಂದ ಅಭಿವೃದ್ಧಿಯಲ್ಲಿ ಮಾತ್ರ ಸಾಕಷ್ಟು ಹಿಂದುಳಿದಿದೆ.

ಕಲ್ಯಾಣ ಕರ್ನಾಟಕದಲ್ಲೇ ಅತಿ ದೊಡ್ಡ ಅರಣ್ಯ ಪ್ರದೇಶ ಕುಂಚಾವರAನಲ್ಲಿದ್ದು, ಸರ್ಕಾರ ವನ್ಯಜೀವಿ ಧಾಮ ಎಂದು ಘೋಷಿಸಿದೆ. ಆದರೆ ಬೇಕಾದ ಸೌಕರ್ಯಗಳಿಲ್ಲ. ನಾಕಾ ಬಂದಿಗಳಿಲ್ಲ, ಅರಣ್ಯ ಇಲಾಖೆಗೆ ಸಂಬAಧಿಸಿದ ಕಚೇರಿ ಸ್ಥಾಪನೆಯಾಗಿಲ್ಲ. ಸಿಬ್ಬಂದಿ ಕೊರತೆಯೂ ಅರಣ್ಯ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಅರಣ್ಯದೊಳಗಿರುವ ಶೇರಿಬಿಕ್ಕನಳ್ಳಿ ತಾಂಡಾ ಸ್ಥಳಾಂತರ ಕಾರ್ಯರೂಪಕ್ಕೆ ಬಂದಿಲ್ಲ.

ಗಡಿ ಸಮೀಕ್ಷೆಯಂತೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತೆಲಂಗಾಣ ಮುಖ್ಯಮಂತ್ರಿ ಚರ್ಚೆ ನಡೆಸಿದ್ದರು. ಬಳಿಕ ಕಲಬುರಗಿ, ಸಂಗಾರೆಡ್ಡಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಎರಡು ಬಾರಿ ಸಭೆ ನಡೆಯಿತಾದರೂ ಸಮೀಕ್ಷೆ ಕಾರ್ಯ ಆಗಲೇ ಇಲ್ಲ.

ಚಿಂಚೋಳಿಗೆ ಅಂಟಿದ್ದ ಮಕ್ಕಳ ಮಾರಾಟ ಅಪಖ್ಯಾತಿ ಹೋಗಲಾಡಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. 2012ರಲ್ಲಿ ತಾಂಡಾ ಸೇರಿ ಹಳ್ಳಿಗಳಲ್ಲಿನ ಮಕ್ಕಳ ಮಾರಾಟ ತಡೆಯಲು ಸರ್ಕಾರ ಶಾದಿಪುರ ಸುತ್ತಲಿನ ಸುಮಾರು 175 ಎಕರೆ ಭೂಮಿಯಲ್ಲಿ ಉಳುಮೆ ಮಾಡಿ ಜೀವನ ನಡೆಸಲು 89 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿತ್ತು. ಆದರೆ ಇಲ್ಲಿವರೆಗೂ ಭೂಮಿ ಹಂಚಿಕೆ ಕಾರ್ಯ ಆಗಿಲ್ಲ.

ದೊಡ್ಡ ಕಂಪನಿ ಆರಂಭವಾದರೆ ಕ್ಷೇತ್ರದ ಯುವಕರಿಗೆ ಉದ್ಯೋಗ ಸಿಗಲಿದೆ ಎಂಬ ಮಹಾದಾಸೆಯೊಂದಿಗೆ ರೈತರು ಚೆಟ್ಟಿನಾಡು, ಕಲಬುರಗಿ (ವಿಕಾಟಸಾಗರ್) ಸಿಮೆಂಟ್ ಕಂಪನಿ ಹಾಗೂ ಮೂರು ಸೋಲಾರ್ ಪ್ಲಾಂಟ್‌ಗಳಿಗೆ ಭೂಮಿ ನೀಡಿದ್ದಾರೆ. ಆದರೆ ಸ್ಥಳ ನೀಡಿದ ರೈತರಿಗೆ ಉದ್ಯೋಗ ಕೊಡುವಲ್ಲಿ ಕಂಪನಿಗಳು ವಿಫಲವಾಗಿವೆ. ಇದರಿಂದಾಗಿ ಗುಳೆ ಹೋಗುವುದು ದಿನಗಳೆದಂತೆ ಹೆಚ್ಚಾಗುತ್ತಲೇ ಇದೆ.

ಇದೀಗ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜನತಾ ದರ್ಶನ ನಡೆಯಲಿದ್ದು, ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಆಶಾಭಾವ ಜನರಲ್ಲಿದೆ. ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿರುವ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸರ್ಕಾರ ಮತ್ತು ಜನಪ್ರತಿನಿಧಿಗಳು ಈಗಲಾದರೂ ಗಮನಹರಿಸಬೇಕಿದೆ.

ನೀರಾವರಿ ಯೋಜನೆ ಉದ್ಘಾಟನೆ ಯಾವಾಗ?
ತಾಲೂಕಿನಲ್ಲಿ ಚಂದ್ರAಪಳ್ಳಿ, ಕೆಳ ಮುಲ್ಲಾಮಾರಿ ಜಲಾಶಯಗಳಿವೆ. ಆದರೆ ಈವರೆಗೆ ಲೋಕಾರ್ಪಣೆ ಭಾಗ್ಯ ಸಿಕ್ಕಿಲ್ಲ. ಈ ಹಿಂದೆ ಡಾ.ಮಲ್ಲಿಕಾರ್ಜುನ ಖರ್ಗೆ 204 ಕೋಟಿ ಅನುದಾನದಲ್ಲಿ ಕೆಳ ಮುಲ್ಲಾಮಾರಿ ಕಾಲುವೆ ದುರಸ್ತಿಗೆ ಚಾಲನೆ ನೀಡಿದ್ದರು. 10 ವರ್ಷ ಗತಿಸಿದರೂ ಕೆಲಸ ಮುಗಿದಿಲ್ಲ. ಮರಿ ಕಾಲುವೆಗಳಂತೂ ಕಣ್ಮರೆಯಾಗಿವೆ. ಹನಿ ನೀರು ರೈತರ ಜಮೀನಿಗೆ ಹರಿದಿಲ್ಲ. ಚಂದ್ರAಪಳ್ಳಿಯೂ ಇದಕ್ಕೆ ಹೊರತಾಗಿಲ್ಲ. ಜಲಾಶಯದ ನೀರು ಕಟ್ಟಕಡೆಯ ರೈತರ ಜಮೀನಿಗೆ ಹರಿಯುತ್ತಿಲ್ಲ. ಜಲಾಶಯಗಳ ಕೆಳಗೆ ಕಾಡಾ ಇಲಾಖೆಯಿಂದ ನೀರು ಬಳಕೆದಾರರ ಸಂಘಗಳಿದ್ದರೂ ನಾಮ್‌ಕೇವಾಸ್ತೆ ಎಂಬAತಿವೆ. ತಾಲೂಕಿನಲ್ಲಿ 21ಕ್ಕೂ ಅಧಿಕ ಸಣ್ಣ ಕೆರೆಗಳಿದ್ದು, ಅವೈಜ್ಞಾನಿಕ ಕಾಲುವೆಗಳಿಂದಲೇ ಸಾಕಷ್ಟು ತಲೆದೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net