ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಸರ್ಕಾರ ವಿಫಲ: ಮಾಜಿ ಸಚಿವ ರಮಾನಾಥ ರೈ

Ramanatha rai
Published on

ಮಂಗಳೂರು: ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಜನಸಾಮಾನ್ಯರಿಗೆ ಹಬ್ಬ ಆಚರಣೆ ಕಷ್ಟವಾಗಿದೆ. ಮುಂದಿನ ದಿನಗಳಲ್ಲಿ ಜನರೇ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಕೇಂದ್ರ ಹಾಗೂ ರಾಜ್ಯದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿ ರಾಜ್ಯ ಹಾಗೂ ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಜನ ನೀಡಿರುವ ಪ್ರತಿಕ್ರಿಯೆಯಿಂದಲೇ ಸಾಬೀತಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಸಾಕಷ್ಟು ಹಣ ಬಲ, ತೋಳ್ಬಲ ಪ್ರದರ್ಶಿಸಿದೆ. ಆಡಳಿತ ಯಂತ್ರವನ್ನೇ ಎರಡು ಕ್ಷೇತ್ರಗಳ ಚುನಾವಣೆ ಸಂದರ್ಭ ದುರುಪಯೋಗಪಡಿಸಿದ್ದಾರೆ. ಆದರೂ ಹಾನಗಲ್‌ನಲ್ಲಿ ಜನತೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಸಿಂಧಗಿ ಕ್ಷೇತ್ರದಲ್ಲಿ ಹಿಂದಿನ ಚುನಾವಣೆಯಲ್ಲಿ ಕ್ಷೀಣಿಸಿದ್ದ ಕಾಂಗ್ರೆಸ್ ಬಲ ಈ ಚುನಾವಣೆಯಲ್ಲಿ ಭಾರಿ ಪ್ರಮಾಣದಲ್ಲಿ ವೃದ್ಧಿಸಲು ಜನರು ಸಹಕರಿಸಿದ್ದಾರೆ ಎಂದರು.

ಅಧಿಕಾರಕ್ಕೆ ಬಂದು 100 ದಿನಗಳಲ್ಲೇ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡುವುದಾಗಿ, ಕಪ್ಪು ಹಣ ತರುವುದಾಗಿ ಹೇಳಿ ಅಧಿಕಾರಕ್ಕೆ ಬಂದು ಜನರಿಗೆ ವಂಚನೆ ಮಾಡಿದ್ದಾರೆ. ಇದೀಗ ಅವರದ್ದೇ ಭಾಷಣದ ತುಣುಕುಗಳನ್ನು ಮತ್ತೆ ನೆನಪಿಸಬೇಕಾದ ಕಾಲ ಬಂದಿದೆ. ನಿರಂತರವಾಗಿ ಸಾಗುತ್ತಿರುವ ಬೆಲೆ ಏರಿಕೆಯಿಂದ ಜನ ರೋಸಿ ಹೋಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತಮ್ಮ ವೈಫಲ್ಯವನ್ನು ಮರೆಮಾಚಲು ಮತೀಯ ಭಾವನೆ ಕೆರಳಿಸುವ ಕಾರ್ಯದಲ್ಲಿ ಬಿಜೆಪಿ ನಿರತವಾಗಿದೆ ಎಂದರು.

ಕರೊನಾ ಕಾರಣದಿಂದ ಬೆಲೆ ಏರಿಕೆ ಎಂಬುದಾಗಿ ಸಮರ್ಥಿಸುತ್ತಿರುವ ಬಿಜೆಪಿ ಜನಪ್ರತಿನಿಧಿಗಳು, ಜಾಗತಿಕವಾಗಿ ಕರೊನಾದಿಂದ ತತ್ತರಿಸಿರುವಾಗ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ ಮೊದಲಾದ ಸಣ್ಣ ರಾಷ್ಟ್ರಗಳಲ್ಲಿ ತೈಲ ಬೆಲೆ ಹೆಚ್ಚಾಗದಿರಲು ಕಾರಣವೇನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಜನರ ನೈಜ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಬೇಕು ಎಂದರು.

ಮುಖಂಡರಾದ ಶಶಿಧರ ಹೆಗ್ಡೆ, ಶಾಲೆಟ್ ಪಿಂಟೋ, ಭಾಸ್ಕರ ಕೆ., ಅಪ್ಪಿ, ಹರಿನಾಥ್, ನೀರಜ್ ಪಾಲ್, ಲುಕ್ಮಾನ್ ಬಂಟ್ವಾಳ, ಶುಭೋದಯ ಆಳ್ವ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net