ಸರ್ಕಾರದ ಸೌಲಭ್ಯಗಳು ಸದ್ಬಳಕೆಯಾಗಲಿ

25ALD01
ಅಳವಂಡಿ ಸಮೀಪದ ಕೋಳೂರು ಗ್ರಾಮದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್ ಶಾಲೆ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ಪ್ರಮುಖರಾದ ಎಸ್.ಬಿ.ನಾಗರಳ್ಳಿ, ಪ್ರಸನ್ನ ಗಡಾದ, ಕೃಷ್ಣರೆಡ್ಡಿ ಗಲಭಿ, ಬಾಲಚಂದ್ರನ್ ಹನುಮರಡ್ಡಿ ಹಂಗನಕಟ್ಟಿ, ಗಾಳೆಪ್ಪ ಪೂಜಾರ ಇತರರಿದ್ದರು.
Published on

ಅಳವಂಡಿ: ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಬೋರ್ಡ್ ಅಳವಡಿಕೆಗೆ ಒತ್ತು ನೀಡಲಾಗುತ್ತಿದೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.

ತಾಲೂಕಿನ ದದೇಗಲ್, ಹಲಗೇರಿ, ಕೋಳೂರು, ಕಾಟ್ರಳ್ಳಿ, ಹಿರೇಸಿಂದೋಗಿ, ಚಿಕ್ಕಸಿಂದೋಗಿ, ಹೊರತಟ್ನಾಳ, ಗುನ್ನಳ್ಳಿ ಮತ್ತು ಮಂಗಳಾಪುರ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು.

ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಡ ಮಕ್ಕಳು ದಾಖಲಾಗುವುದರಿಂದ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವತ್ತ ಗಮನಹರಿಸಬೇಕು. ವಿದ್ಯಾರ್ಥಿಗಳು ಸರ್ಕಾರದ ಶೈಕ್ಷಣಿಕ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮವಾಗಿ ಅಭ್ಯಾಸಿಸಿ ಉನ್ನತ್ತ ಮಟ್ಟದ ಸಾಧನೆ ಮಾಡಬೇಕು. ಮೊಬೈಲ್ ಮತ್ತು ಟಿ.ವಿಗಳನ್ನ ಅಗತ್ಯಕ್ಕೆ ತಕ್ಕಂತೆ ಬಳಸಿ, ಆಧುನಿಕ ತಂತ್ರಜ್ಞಾನ ಸದ್ಬಳಕೆ ಮಾಡಿಕೊಳ್ಳಿ ಎಂದರು.

ಬಡಜನರ ಏಳಿಗೆಗಾಗಿ ರಾಜ್ಯ ಸರ್ಕಾರ ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಅಧಿಕಾರಕ್ಕೆ ಬಂದ ಎಂಟು ತಿಂಗಳಲ್ಲಿ ಬಡಜನರ ಬವಣೆ ನೀಗಿಸಲು ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿ, ಬಡವರ, ದೀನದಲಿತರ, ಹಿಂದುಳಿದವರ ಏಳಿಗೆ ಕಾಂಗ್ರೆಸ್ ಬಯಸುತ್ತಿದೆ.

ಬಿಜೆಪಿ ಕೋಮು ಗಲಭೆ, ಪ್ರಚೋದನೆ ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ಜನರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆಯೂ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಪ್ರತಿಯೊಬ್ಬರು ಗ್ಯಾರಂಟಿ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಿ. ರಾಜ್ಯಾದ್ಯಂತ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಪ್ರಚಾರಕ್ಕಾಗಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ರಚನೆ ಮಾಡಲಾಗಿದೆ. ಮುಂಬರುವ ದಿನದಲ್ಲಿ ಪ್ರತಿ ಮನೆಗೂ ಭೇಟಿ ನೀಡಿ, ಸರ್ಕಾರದ ಗ್ಯಾರಂಟಿ ಯೋಜನೆ ಬಗ್ಗೆ ಮನವರಿಕೆ ಮಾಡುವ ಕೆಲಸವನ್ನು ಸಮಿತಿಯವರು ಹಾಗೂ ಕಾರ್ಯಕರ್ತರು ಮಾಡಬೇಕು ಎಂದರು.

ಗ್ರಾಮೀಣ ಭಾಗದಲ್ಲಿ ಹದೆಗೆಟ್ಟಿರುವ ರಸ್ತೆಗಳಿಗೆ ಮುಕ್ತಿ ನೀಡುವ ಉದ್ದೇಶದಿಂದ ಡಾಂಬರೀಕರಣಕ್ಕೆ ಮುಂದಿನ ದಿನಗಳಲ್ಲಿ ಚಾಲನೆ ನೀಡಲಾಗುವುದು. ಗ್ರಾಮದ ಪ್ರತಿ ರಸ್ತೆಗಳನ್ನು ಸಿಸಿ ರಸ್ತೆಯನ್ನಾಗಿ ಮಾಡುವ ಸದುದ್ದೇಶದಿಂದ ಕೋಟ್ಯಾಂತರ ರೂ. ಅನುದಾನ ಬಿಡುಗಡೆಗೊಳಿಸಿ, ಭೂಮಿಪೂಜೆ ನೆರವೇರಿಸಿದ್ದೇನೆ.

ಮುಂದಿನ ದಿನದಲ್ಲಿ ಹಂತ ಹಂತವಾಗಿ ಎಲ್ಲ ಗ್ರಾಮಕ್ಕೂ ಸಮಾನ ಅನುದಾನ ಹಂಚಿಕೆ ಮಾಡಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಜಿಪಂ ಮಾಜಿ ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ಪ್ರಸನ್ನ ಗಡಾದ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣರಡ್ಡಿ ಗಲಭಿ, ತಾಪಂ ಮಾಜಿ ಅಧ್ಯಕ್ಷ ಹಾಗೂ ಗ್ಯಾರಂಟಿ ಯೋಜನೆ ಅನುಷ್ಠಾನ ತಾಲೂಕಾಧ್ಯಕ್ಷ ಬಾಲಚಂದ್ರನ್,

ಎಪಿಎಂಸಿ ಮಾಜಿ ಅಧ್ಯಕ್ಷ ಹನುಮರಡ್ಡಿ ಹಂಗನಕಟ್ಟಿ, ಮುಖಂಡರಾದ ಗಾಳೆಪ್ಪ ಪೂಜಾರ, ಪ್ರಸನ್ನ ಗಡಾದ , ನವೋದಯ ವಿರೂಪಾಕ್ಷಪ್ಪ, ಗವಿಸಿದ್ದನಗೌಡ ಪಾಟೀಲ, ಪರಶುರಾಮ ಕೆರೆಳ್ಳಿ, ವರುಣ್ ಕುಮಾರ್ ನಿಟ್ಟಾಲಿ, ಕಾವೇರಿ ರಾಗಿ, ಹನುಮಂತ ಎಚ್, ಅಶೋಕ ಅಬ್ಬಿಗೇರಿ, ಕೇಶವರೆಡ್ಡಿ, ದೌಲತ್ ಸಾಬ, ದೇವೇಂದ್ರಪ್ಪ ಕೋಳೂರು, ವಸಂತ ಕುಟುಗನಹಳ್ಳಿ, ತಹಸೀಲ್ದಾರ್ ವಿಠ್ಠಲ ಚೌಗಲೆ, ತಾಪಂ ಇಓ ದುಂಡಪ್ಪ ತುರಾದಿ, ಸಿಡಿಪಿಓ ಜಯಶ್ರೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net