

ಮಂಡ್ಯ: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ 7ನೇ ವೇತನ ಆಯೋಗವನ್ನು ಕೂಡಲೇ ರಚಿಸಿ ಮಧ್ಯಂತರ ಪರಿಹಾರ ಘೋಷಿಸಬೇಕೆಂದು ಆಗ್ರಹಿಸಿ ಜಿಲ್ಲೆಯ ಸರ್ಕಾರಿ ನೌಕರರ ಒಕ್ಕೂಟದಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಯಿತು.
ಕೋವಿಡ್ ಸಂದರ್ಭದಲ್ಲಿ ಮುಟ್ಟುಗೋಲು ಹಾಕಿಕೊಂಡಿರುವ ನೌಕರರ ಮತ್ತು ಪಿಂಚಣಿದಾರರ 18 ತಿಂಗಳ ಬಾಕಿ ತುಟ್ಟಿಭತ್ಯೆಯನ್ನು ತಕ್ಷಣವೇ ಬಿಡುಗಡೆ ಮಾಡಬೇಕು. 2022 ಜುಲೈನಿಂದ ಜಾರಿಗೆ ಬರುವಂತೆ ಶೇ.25ರಷ್ಟು ಮಧ್ಯಂತರ ಪರಿಹಾರವನ್ನು ಕೂಡಲೇ ಘೋಷಿಸಬೇಕು. ನೂತನ ಪಿಂಚಣಿ ಯೋಜನೆಯನ್ನು (ಎನ್‌ಪಿಎಸ್) ರದ್ದುಪಡಿಸಿ ನಿಶ್ಚಿತ ಪಿಂಚಣಿ ಪದ್ಧತಿ ಮರುಸ್ಥಾಪಿಸಬೇಕು. ಆಡಳಿತ ಸುಧಾರಣಾ ಆಯೋಗ-2ರ ನೌಕರ-ವಿರೋಧಿ ಶಿಫಾರಸುಗಳನ್ನು ಕೈಬಿಡಬೇಕು. ಖಾಲಿಯಿರುವ 2.80 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಜಿಲ್ಲಾ ಸಂಚಲನಾ ಸಮಿತಿ ಸದಸ್ಯೆ ರೇಣುಕಾ, ಸದಸ್ಯ ಎನ್.ಮಹದೇವ, ಜಿಲ್ಲಾ ಸಂಚಾಲಕ ಕೆ.ಪಿ.ರಾಜು, ಎಂ.ಎಸ್.ಶೈಲಜಾ, ಎಚ್.ಎಂ.ಪಾಪಣ್ಣ, ಜಿ.ವಿ.ಶಿವಕುಮಾರ್, ಸಿದ್ದರಾಜು, ಬಿ.ಆರ್.ರೂಪಾ ಇತರರಿದ್ದರು.
ಬೆಂಬಲ: ಸರ್ಕಾರಿ ನೌಕರರ ಒಕ್ಕೂಟಕ್ಕೆ ಬೆಂಬಲ ಸೂಚಿಸಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಧರಣಿಯಲ್ಲಿ ಪಾಲ್ಗೊಂಡರು.