

ಅಥಣಿ: ಜಿಲ್ಲೆಯಲ್ಲಿ ಕರೊನಾ ಸೋಂಕು ನಿಯಂತ್ರಣಕ್ಕೆ ತರಲು ಅಧಿಕಾರಿಗಳು ಹಗಲಿರುಳು ಶ್ರಮಿಸುತ್ತಿರುವುದು ಸಂತಸದ ವಿಚಾರ. ಜನರು ಮನೆಯಿಂದ ಹೊರಬರದೆ ಕರೊನಾ ಸೋಂಕು ನಿಯಂತ್ರಣಕ್ಕೆ ಸಹಕಾರ ನೀಡಬೇಕು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಕೋರಿದ್ದಾರೆ.
ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಕರೊನಾ ನಿಯಂತ್ರಣದಲ್ಲಿರುವುದು ಸಂತಸದ ಸಂಗತಿ. ಸೋಂಕಿನ ಪೂರ್ಣ ಪ್ರಮಾಣದ ನಿಯಂತ್ರಣಕ್ಕೆ ಜನರು ಲಾಕ್‌ಡೌನ್ ಆದೇಶ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಯಾವುದೇ ಕಾರಣಕ್ಕೂ ಗ್ರಾಮೀಣ ಪ್ರದೇಶದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದು. ನಿಯಮ ಮೀರಿ ಮದ್ಯ ಮಾರಾಟ ಮಾಡುವುದು ಕಂಡುಬಂದರೆ ಅಬಕಾರಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಜತೆಗೆ ಈಗಾಗಲೇ ಕಳ್ಳತನವಾಗಿರುವ ಮದ್ಯದಂಗಡಿಗಳನ್ನು ಪರಿಶೀಲಿಸಿ ತಪ್ಪಿತಸ್ಥರನ್ನು ಬಂಧಿಸುವ ಕಾರ್ಯವಾಗಬೇಕು ಎಂದು ಸೂಚಿಸಿದರು.
ಅಧಿಕಾರಿಗಳಿಗೆ ಪ್ರೋತ್ಸಾಹ ನೀಡಿ. ಕುಡಚಿ ಮತ್ತು ಹಿರೇಬಾಗೇವಾಡಿಯಲ್ಲಿ ಕರೊನಾ ನಿಯಂತ್ರಣದಲ್ಲಿದೆ. ಜನರು ಆತಂಕಪಡುವ ಅಗತ್ಯವಿಲ್ಲ. ಅದೇ ರೀತಿ ಅಥಣಿ, ಗೋಕಾಕ, ಮೂಡಲಗಿಯಲ್ಲಿ ಅಧಿಕಾರಿಗಳು ಸೋಂಕು ನಿಯಂತ್ರಣಕ್ಕೆ ಶ್ರಮಿಸುತ್ತಿರುವುದು ಸಂತಸದ ವಿಚಾರ. ಜನಪ್ರತಿನಿಧಿಗಳು ಅವರಿಗೆ ಪ್ರೋತ್ಸಾಹ ನೀಡಬೇಕು ಎಂದರು. ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ಸರ್ಕಾರದ ಆದೇಶವನ್ನು ಎಲ್ಲರೂ ಪಾಲಿಸಬೇಕು. ಆದೇಶ ಉಲ್ಲಂಘಿಸಿ ಹೊರಬಂದರೆ ಆರೋಗ್ಯಕ್ಕೆ ಹಾನಿಕಾರಕ ಎಂದರು.
ಪ್ರಾಮಾಣಿಕವಾಗಿ ಸ್ಪಂದಿಸುತ್ತಿರುವೆ: ಶಾಸಕರು ಕಾಣೆಯಾಗಿದ್ದಾರೆ, ಜನಸಂದ್ಪನೆ ಇಲ್ಲವೆಂದು ಜನರು ಮಾತನಾಡುತ್ತಿದ್ದಾರೆಂಬ ಪ್ರಶ್ನೆಗೆ ಉತ್ತರಿಸಿದ ಕುಮಠಳ್ಳಿ, ಗುಂಪಾಗಿ ಸೇರುವುದರಿಂದ ಇನ್ನೊಬ್ಬರಿಗೆ ವೈರಸ್ ಹರಡುವ ಸಾಧ್ಯತೆ ಜಾಸ್ತಿ. ಆದ್ದರಿಂದ ನಾನು ಮನೆಯಿಂದ ಹೊರಬಂದಿಲ್ಲ. ಅದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡು ಆರೋಪ ಮಾಡುತ್ತಿದ್ದಾರೆ. ನನ್ನ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಿರುವೆ ಎಂದು ಉತ್ತರಿಸಿದರು. ಉಪತಹಸೀಲ್ದಾರ್ ರಾಜು ಬುರ್ಲಿ, ತಾಪಂ ಇಒ ರವಿ ಬಂಗಾರೆಪ್ಪನವರ, ಡಿವೈಎಸ್‌ಪಿ ಎಸ್.ವಿ.ಗಿರೀಶ, ಸಿಪಿಐ ಶಂಕರಗೌಡ ಬಸನಗೌಡರ, ಅಧಿಕಾರಿಗಳಾದ ಎಸ್.ಎಸ್.ಮಾಕಾಣಿ, ಬಿ.ಎಸ್.ಯಾದವಾಡ, ಎಸ್.ಡಿ.ಗುಂಡ್ಲೂರ, ಎಸ್.ಎಲ್.ಕುಡ್ಡಣವರ, ಶೇಖರ ಬಹುರೂಪಿ, ಡಾ.ಎಸ್.ಎಂ.ಕೊಪ್ಪದ, ಡಾ.ಬಾಹುಬಲಿ ಐಗಳಿ ಉಪಸ್ಥಿತರಿದ್ದರು.