ಸಿಂಧನೂರು ಜಿಲ್ಲೆಯಾಗಿಸುವ ಕೂಗ ಮತ್ತೆ ಮುನ್ನೆಲೆಗೆ

mivi-vidhanasowda
Published on

ಅಶೋಕ ಬೆನ್ನೂರು ಸಿಂಧನೂರು
ಕಾಂಗ್ರೆಸ್ ಈಗಾಗಲೇ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಈಡೇರಿಸಲು ಬದ್ಧವಾಗಿದೆ ಆದರೆ, ಸಿಂಧನೂರು ಜಿಲ್ಲೆಯಾಗಿಸುವ ಅಂಶ ಮುಂದಿಟ್ಟುಕೊಂಡು ಭರ್ಜರಿ ಗೆಲುವು ಸಾಧಿಸಿರುವ ಹಂಪನಗೌಡ ಬಾದರ್ಲಿಗೆ ಈ ಬೇಡಿಕೆ ಈಡೇರಿಸಲು ಸರ್ಕಾರದ ಮೇಲೆ ಒತ್ತಡ ತರುವ ಕೂಗು ಎದ್ದಿದೆ.

ಕಳೆದ ಐದಾರು ವರ್ಷಗಳಿಂದ ಸಿಂಧನೂರು ಜಿಲ್ಲೆಯಾಗಿಸುವ ಕೂಗು ಕೇಳಿಬರುತ್ತಿದೆ ಆದರೆ, ವಿಧಾನಸಭೆ ಚುನಾವಣೆ ವೇಳೆ ಈ ಬೇಡಿಕೆಯನ್ನು ಚುನಾವಣಾ ಪ್ರಣಾಳಿಕೆಯ ಬತ್ತಳಿಕೆಯನ್ನಾಗಿಸಿಕೊಂಡಿದ್ದ ಹಾಲಿ ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಶಾಸಕ ವೆಂಕಟರಾವ ನಾಡಗೌಡ ಈಡೇರಿಸುವ ಇರಾದೆ ಹೊಂದಿದ್ದರು. ಇದಕ್ಕೆ ಪೂರಕ ಎನ್ನುವಂತೆ ಕಳೆದ ನಾಲ್ಕು ವರ್ಷದ ಹಿಂದೆ ಹಂಪನಗೌಡ ಬಾದರ್ಲಿ ಸಿಎಂಗೆ ಪತ್ರ ಬರೆದಿದ್ದರು.

ಇದಕ್ಕೆ ಉಳಿದ ಜನಪ್ರತಿನಿಧಿಗಳು ಕೂಡ ಧ್ವನಿಗೂಡಿಸಿದ್ದರು. ನಂತರ ಈ ಬಗ್ಗೆ ಕೆಲ ಸಂಘಟನೆಗಳು ಆಗಾಗ ಕೂಗು ಹಾಕಿದ್ದರು. ರಾಜಕೀಯವಾಗಿ ಈ ಬೇಡಿಕೆ ಮುನ್ನೆಲೆಗೆ ಬಂದಿರಲಿಲ್ಲ. ಚುನಾವಣೆಯಲ್ಲಿ ಮಾತ್ರ ಸಿಂಧನೂರು ಜಿಲ್ಲಾ ಕೇಂದ್ರವಾಗಿಸುವ ಕೂಗು ಕೇಳಿಬರುತ್ತಿತ್ತು ಮತ್ತು ಮಹತ್ವ ಪಡೆದುಕೊಳ್ಳುತ್ತಿತ್ತು. ಈ ಬೇಡಿಕೆ ಈಡೇರಿಸಿಕೊಳ್ಳಲು ಯುವ ಶಕ್ತಿ ಕೂಡ ಆಸಕ್ತಿ ತಳಿದು, ಯಾರಿಗೆ ಮತ ನೀಡಿದರೆ ಈಡೇರಬಹುದೆಂಬ ಲೆಕ್ಕಾಚಾರವೂ ನಡೆದಿತ್ತು.

ತಮ್ಮ ಪ್ರಣಾಳಿಕೆಯಲ್ಲಿ ಮುಖ್ಯ ಬೇಡಿಕೆಯಾಗಿಸಿಕೊಂಡಿದ್ದ ಹಂಪನಗೌಡ ಬಾದರ್ಲಿ ಭರ್ಜರಿ ಜಯಗಳಿಸಿದ್ದು ಅವರ ಮತ್ತು ಸರ್ಕಾರದ ಮುಂದೆ ಈ ಬೇಡಿಕೆ ಇದೆ. ಸಿಂಧನೂರು ಜಿಲ್ಲಾ ಕೇಂದ್ರ ಸ್ಥಾಪನಾ ಸಮಿತಿಯು ಅಸ್ತಿತ್ವದಲ್ಲಿದೆ. ಅವರು ಕೂಡ ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಕೆ ಬಗ್ಗೆ ಚಿಂತನೆ ನಡೆಸಿದ್ದಾರೆ.

ಸೂರು, ಮಂಡ್ಯ, ರಾಮನಗರ, ಬೆಂಗಳೂರು ಜಿಲ್ಲೆ ಇತರ ನಗರಗಳು 60-80 ಕಿಮೀ ಅಂತರ ಇದ್ದರೂ ಜಿಲ್ಲಾ ಕೇಂದ್ರ ಮಾಡಲಾಗಿದೆ. ರಾಯಚೂರಿಗೆ 100 ಕಿಮೀ ದೂರ ಕ್ರಮಿಸಬೇಕಿರುವ ಸಿಂಧನೂರಿಗೆ ಏಕೆ ಜಿಲ್ಲಾ ಕೇಂದ್ರವಿಲ್ಲ ಎನ್ನುವ ಆರೋಪ ಇದೆ.

ಸಿಂಧನೂರು ಎಲ್ಲ ದೃಷ್ಟಿಯಿಂದಲೂ ಜಿಲ್ಲಾ ಕೇಂದ್ರವಾಗಿಸಿಕೊಳ್ಳುವ ಅರ್ಹತೆ ಪಡೆದಿದೆ. ಅಧಿಕ ಭೂಮಿ, ನೀರಾವರಿ, ವ್ಯಾಪಾರ-ವಹಿವಾಟು, ಟ್ರ್ಯಾಕ್ಟರ್, ವಾಹನ ಮಾರಾಟ, ಭತ್ತದ ರಫ್ತು ಹೀಗೆ ಎಲ್ಲವನ್ನೂ ಒಳಗೊಂಡಿದೆ. ಆದರೂ ಜಿಲ್ಲಾ ಕೇಂದ್ರಕ್ಕೆ ವಿಳಂಬ ಏಕೆ? ಎನ್ನುವುದು ಪ್ರಗತಿಪರ ಸಂಘಟಗಳೆ ಪ್ರಶ್ನೆಯಾಗಿದೆ.

ಈಗಾಗಲೇ ಕಾಂಗ್ರೆಸ್ ಸರ್ಕಾರ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನತೆಗೆ ನೀಡಿದ ಐದು ಭರವಸೆಯಲ್ಲಿ ಒಂದು ಈಡೇರಿಸಿದ್ದು ನಾಲ್ಕನ್ನು ಈಡೇರಿಸುವ ಸಾಧ್ಯತೆ ಹೆಚ್ಚಿದೆ. ಕ್ಷೇತ್ರದ ಶಾಸಕ ಹಂಪನಗೌಡ ಬಾದರ್ಲಿ, ಸಿಂಧನೂರನ್ನು ಜಿಲ್ಲಾ ಕೇಂದ್ರವಾಗಿಸುವ ಭರವಸೆ ನೀಡಿದ್ದು ಈಗ ಅವರದ್ದೆ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ ಈ ಬೇಡಿಕೆಗೆ ಪುರಸ್ಕಾರ ಸಿಗಲಿದೆನ್ನುವ ಮಾತುಗಳಿವೆ.

ಒಮ್ಮಿಂದಲೇ ಜಿಲ್ಲಾ ಕೇಂದ್ರ ಘೋಷಣೆ ಮಾಡುವುದು ಸುಲಭದ ಕೆಲಸವಲ್ಲ. ನಿರಂತರ ಪತ್ರ ವ್ಯವಹಾರ, ಇಲ್ಲಿನ ಸಾಧಕ-ಬಾಧಕಗಳು ಎಲ್ಲವು ನಡೆಯಬೇಕಿದೆ.

ಚುನಾವಣೆಯಲ್ಲಿ ಸಿಂಧನೂರು ಜಿಲ್ಲಾ ಕೇಂದ್ರವಾಗಿಸುವ ಬೇಡಿಕೆ ಮುಂದಿಟ್ಟುಕೊಂಡು ಜನಪ್ರತಿನಿಧಿಗಳು ಮತಯಾಚನೆ ಮಾಡಿದ್ದಾರೆ. ಈಗ ಶಾಸಕರಾಗಿದ್ದು ರಾಜ್ಯದಲ್ಲಿಯೂ ಅವರದ್ದೇ ಸರ್ಕಾರ ಇದೆ. ಈಗ ಜಿಲ್ಲಾ ಕೇಂದ್ರವಾಗಿಸುವ ಕಾಲವು ಸನ್ನಿತವಾಗಿದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಗಟ್ಟಿ ನಿರ್ಧಾರವಾಗಬೇಕಿದೆ.ಅವಿನಾಶ ದೇಶಪಾಂಡೆ, ಕಾರ್ಯದರ್ಶಿ, ಜೀವ ಸ್ಪಂದನಾ ಟ್ರಸ್ಟ್, ಸಿಂಧನೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net