ಸರ್ಕಾರಿ ಕಾಲೇಜಿಗೆ ಸಿ.ಎ. ಸೈಟ್ ಹಂಚಿಕೆ ವಿಳಂಬ

college site
Published on

ಬೆಂಗಳೂರು: ಜನಸಾಮಾನ್ಯರಿಗೆ ನಿವೇಶನ ನೀಡಲು ಸುಖಾಸುಮ್ಮನೆ ಅಲೆದಾಡಿಸಲಾಗುತ್ತದೆ ಎಂಬ ಆರೋಪ ಹೊತ್ತಿರುವ ಬಿಡಿಎ, ಸರ್ಕಾರಿ ಕಾಲೇಜಿಗೆ ಸಿ.ಎ. ನಿವೇಶನ ಹಂಚಿಕೆ ಮಾಡಲು ವಿಳಂಬ ಧೋರಣೆ ಅನುಸರಿಸುತ್ತಿದೆ ಎಂಬ ಆಕ್ಷೇಪ ಕೇಳಿಬಂದಿದೆ.

ಬಿಡಿಎ ನಿರ್ಮಿತ ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆಯ 1ನೇ ಬ್ಲಾಕ್‌ನಲ್ಲಿರುವ ಮೂರನೇ ಸಂಖ್ಯೆಯ ಸಿ.ಎ. ಸೈಟ್ ಕಾಲೇಜು ಸ್ಥಾಪನೆಗೆ ಮೀಸಲಿಡಲಾಗಿದೆ. ದಶಕಗಳ ಹಿಂದೆಯೇ ಈ ಜಾಗವನ್ನು ಶಿಕ್ಷಣದ ಉದ್ದೇಶಕ್ಕೆ ಮೀಸಲಿಟ್ಟಿದ್ದರೂ, ಈವರೆಗೂ ಸದ್ಬಳಕೆಗೆ ಅವಕಾಶ ಸಿಕ್ಕಿಲ್ಲ. ದಶಕದ ಹಿಂದೆಯೇ ಕೆಂಗೇರಿ ಉಪನಗರದಲ್ಲಿ ಸರ್ಕಾರಿ ಕಾಲೇಜಿಗೆ ನಿವೇಶನವನ್ನು ಬಿಡಿಎ ಮಂಜೂರು ಮಾಡಿತ್ತು. ಆದರೆ, ಜಾಗದ ತಗಾದೆಯಿಂದಾಗಿ ಆ ನಿವೇಶನ ಕಾಲೇಜಿಗೆ ಸಿಗಲಿಲ್ಲ. ಇದರಿಂದಾಗಿ ಕಾಲೇಜು ಸರ್ಕಾರಿ ಪ್ರೌಢಶಾಲೆ ಆವರಣದಲ್ಲೇ ನಡೆಸುವಂತಾಗಿದೆ.

ಇದನ್ನು ಮನಗಂಡು ಕಳೆದ ಫೆಬ್ರವರಿಯಲ್ಲಿ ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ. ಸೋಮಶೇಖರ್ ಅವರು ಬಿಡಿಎಗೆ ಪತ್ರ ಬರೆದು ವಿಶ್ವೇಶ್ವರಯ್ಯ ಲೇಔಟ್‌ನಲ್ಲಿರುವ ಸಿ.ಎ. ನಿವೇಶನವನ್ನು ಸರ್ಕಾರಿ ಪದವಿ ಕಾಲೇಜಿಗೆ ಹಂಚಿಕೆ ಮಾಡುವಂತೆ ಪ್ರಾಧಿಕಾರವನ್ನು ಕೋರಿದ್ದರು. ಶಾಸಕರ ಪತ್ರ ಆಧರಿಸಿ ಬಿಡಿಎ ಅಧ್ಯಕ್ಷರು ಹಾಗೂ ಆಯುಕ್ತರು ಸಿ.ಎ. ನಿವೇಶನ ಹಂಚಿಕೆ ಮಾಡುವ ಭರವಸೆ ನೀಡಿದ್ದರು. ಆ ಬಳಿಕ ನಿಯಮದಂತೆ ಸಿ.ಎ. ಹಂಚಿಕೆ ವಿಭಾಗದಿಂದ ಕಡತ ಸೃಷ್ಟಿಯಾಗಿ ವಿವಿಧ ಮಾಹಿತಿ ಕ್ರೋಡೀಕರಿಸಿ ಆಯುಕ್ತರ ಕಚೇರಿಗೆ ರವಾನಿಸಬೇಕಿತ್ತು. ಆದರೆ, 5 ತಿಂಗಳು ಕಳೆದರೂ ಈವರೆಗೆ ಕಡತ ರವಾನೆಯಾಗಿಲ್ಲ. ಈ ಬಗ್ಗೆ ಶಾಸಕರ ಕಚೇರಿಯ ಪ್ರತಿನಿಧಿಗಳು ಪ್ರಾಧಿಕಾರವನ್ನು ಸಂಪರ್ಕಿಸಿದರೂ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ ಎನ್ನಲಾಗಿದೆ.

ಅನುದಾನ ಕೊರತೆ ಇಲ್ಲ:

ಬಿಡಿಎ ಹಂಚಿಕೆ ಮಾಡುವ ಸಿ.ಎ. ನಿವೇಶನಕ್ಕೆ ಸರ್ಕಾರಿ ದರ ನಿಗದಿ ಮಾಡಿರುವಷ್ಟು ಹಣ ನೀಡಿ ನೋಂದಣಿ ಮಾಡಿಕೊಳ್ಳಲು ಸರ್ಕಾರಿ ಕಾಲೇಜು ಬಳಿ ಆರ್ಥಿಕ ಸಂಪನ್ಮೂಲ ಇದೆ. ಕೆಲ ವರ್ಷಗಳ ಹಿಂದೆಯೇ ಕಾಲೇಜು ಶಿಕ್ಷಣ ಇಲಾಖೆ ಎರಡು ಕಂತುಗಳಲ್ಲಿ ನೀಡಿದ್ದ 2.5 ಕೋಟಿ ರೂ. ಹಾಗೆಯೇ ಉಳಿದಿದೆ. ಜತೆಗೆ ಈ ಹಿಂದೆ ಕೆಂಗೇರಿ ಉಪನಗರದಲ್ಲಿ ಹಂಚಿಕೆಯಾಗಿದ್ದ ಸೈಟ್‌ಗೆ ಪಾವತಿಸಿದ್ದ 1.30 ಕೋಟಿ ರೂ. ಸೇರಿ ಒಟ್ಟು 3.80 ಕೋಟಿ ರೂ. ಹಣ ಕಾಲೇಜು ಬ್ಯಾಂಕ್ ಖಾತೆಯಲ್ಲಿದೆ. ಸದ್ಯ ಬಿಡಿಎ ಸಿ.ಎ. ನಿವೇಶನವನ್ನು ಹಂಚಿಕೆ ಮಾಡಿದರೆ ತಕ್ಷಣವೇ ಅಗತ್ಯ ಹಣ ಪಾವತಿಸಲು ಸಿದ್ಧವಾಗಿದ್ದು, ಈ ಮಾಹಿತಿಯನ್ನು ಬಿಡಿಎಗೆ ತಿಳಿಸಲಾಗಿದೆ. ಆದರೂ, ಬಿಡಿಎ ಅಧಿಕಾರಿಗಳು ಸರ್ಕಾರಿ ಕಾಲೇಜಿಗೆ ನಿವೇಶನವನ್ನು ಹಂಚಿಕೆ ಮಾಡಲು ಮೀನ-ಮೇಷ ಮಾಡುತ್ತಿದೆ ಎಂದು ದೂರು ಕೇಳಿಬಂದಿದೆ.

ಕಟ್ಟಡ ಇಲ್ಲದೆ ಕಾಲೇಜು ಕಳಾಹೀನ:

ಪ್ರಸ್ತುತ ಕೆಂಗೇರಿ ಉಪನಗರದಲ್ಲಿ ಕಾರ್ಯಾಚರಿಸುತ್ತಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ 1090 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬಹು ವಿಸ್ತಾರವಾಗಿರುವ ಯಶವಂತಪುರ ಕ್ಷೇತ್ರದಲ್ಲಿ ಇದೊಂದೇ ಸರ್ಕಾರಿ ಪದವಿ ಕಾಲೇಜು ಕಾರ್ಯನಿರ್ವಹಿಸುತ್ತಿದೆ. ಬೇರೆಡೆ ಸರ್ಕಾರಿ ಪದವಿ ಕಾಲೇಜು ಇಲ್ಲದ ಕಾರಣ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ಕಾಲೇಜನ್ನೇ ಆಶ್ರಯಿಸಿದ್ದಾರೆ. ಸರ್ಕಾರಿ ಪ್ರೌಢಶಾಲೆಗೆ ಸೇರಿದ ಕಟ್ಟಡದಲ್ಲಿ ಡಿಗ್ರಿ ಕಾಲೇಜಿನ ಪಾಠ-ಪ್ರವಚನ ನಡೆಯುತ್ತಿದೆ. ಬಿ.ಎ., ಬಿ.ಕಾಂ., ಬಿಬಿಎ, ಬಿಎಸ್ಸಿ ಹಾಗೂ ಬಿಸಿಎ ಕೋರ್ಸ್‌ನಲ್ಲಿ ಒಟ್ಟು 1,090 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 30 ಕೊಠಡಿಗಳು ಬೇಕಿವೆ. ಈಗಿರುವುದು 13 ಕೊಠಡಿ ಮಾತ್ರ, ಅದೂ ಶೀಟ್ ತಾರಸಿ ಹೊಂದಿರುವ ಕಟ್ಟಡದಲ್ಲಿ ಪಾಠಗಳು ನಡೆಯುತ್ತಿದೆ. ವಿಜ್ಞಾನ ವಿಭಾಗದ ಪ್ರಯೋಗಾಲಯ, ಗ್ರಂಥಾಲಯ, ಉಪನ್ಯಾಸಕರಿಗೆ ಪ್ರತ್ಯೇಕ ಕೊಠಡಿ ಇಲ್ಲ. ಇದಕ್ಕೆ ಪೋಷಕರು ಆಕ್ಷೇಪಿಸಿದ್ದು, ನಮ್ಮ ಮಕ್ಕಳು ಶೀಟ್ ಕೊಠಡಿಗಳಲ್ಲಿ ಕಲಿಯಬೇಕೇ ಎಂದು ಶಾಸಕರಲ್ಲಿ ದೂರಿದ್ದಾರೆ.

ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಸರ್ಕಾರಿ ಕಾಲೇಜಿಗೆ ಸಿ.ಎ. ನಿವೇಶನ ಹಂಚಿಕೆ ಕೋರಿ ಪ್ರಾಧಿಕಾರಕ್ಕೆ ಶಾಸಕರ ಪತ್ರ ಬಂದಿದೆ. ಈ ಸಂಬಂಧ ಕಡತ ವಿಲೇ ಯಾವ ಹಂತದಲ್ಲಿದೆ ಎಂಬುದನ್ನು ದೃಢಪಡಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಲಾಗುವುದು.

- ಎನ್.ಜಯರಾಮ್, ಬಿಡಿಎ ಆಯುಕ್ತ

ಸದ್ಯ ಕಾರ್ಯನಿರ್ವಹಿಸುತ್ತಿರುವ ಪದವಿ ಕಾಲೇಜಿನಲ್ಲಿ ಕೊಠಡಿಗಳ ಕೊರತೆಯಿಂದ ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ-ಪ್ರವಚನ ನಡೆಸಲು ಕಷ್ಟವಾಗುತ್ತಿದೆ. ವಿಜ್ಞಾನ ವಿಭಾಗಕ್ಕೆ ಲ್ಯಾಬ್ ಸಹಿತ ಇತರ ಸೌಕರ್ಯ ಒದಗಿಸಬೇಕಿರುವುದರಿಂದ ಡಿಗ್ರಿ ಕಾಲೇಜಿಗೆ ಪ್ರತ್ಯೇಕ ಕಟ್ಟಡ ಅವಶ್ಯವಿದೆ. ಈಗಾಗಲೇ ಮೀಸಲಿಟ್ಟಿರುವ ಸಿ.ಎ. ಸೈಟ್ ಹಂಚಿಕೆ ಆದಲ್ಲಿ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ.

- ಡಾ. ಎ.ವಿ.ಲಕ್ಷ್ಮೀನಾರಾಯಣ, ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ, ಕೆಂಗೇರಿ ಉಪನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net