

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ ನಡೆದರಿರುವ ಅವ್ಯವಹಾರ ಸಂಬಂಧ ಸರ್ಕಾರ ಸಿಬಿಐ ತನಿಖೆ ಮಾಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಭಾನುವಾರಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಂದ ಸನ್ಮಾನ ಸ್ಪೀಕರಿಸಿ ಮಾತನಾಡಿದರು.
ಮುಖ್ಯಮಂತ್ರಿ ಅವರ ತವರು ಜಿಲ್ಲೆಯಲ್ಲಿನ ಮುಡಾದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರವಾಗಿರುವುದು ಬೆಳಕಿಗೆ ಬಂದಿದೆ. ನಿವೇಶನಗಳನ್ನು ಕಾನೂನು ಬಾಹಿರವಾಗಿ ಪರಭಾರೆ ಮಾಡಲಾಗಿದೆ. ಬಡವರು, ದಲಿತರಿಗೆ ಕೊಡಲಿಕ್ಕೆ ಇವರಿಗೆ ನಿವೇಶನಗಳಿಲ್ಲ, ಕಳ್ಳರು ಕಾಕರಿಗೆ ಬೇನಾಮಿಯಾಗಿ ಕೊಡಲಿಕ್ಕೆ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಕಿಡಿಕಾರಿದರು. ಈ ಸಂಬಂಧ ಸಿಬಿಐ ತನಿಖೆಗೆ ಒತ್ತಾಯಿಸುವುದರೊಂದಿಗೆ ಸದನದಲ್ಲಿ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಮುಡಾದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಇಂತಹ ಹಗರಣಗಳು ಮೈಸೂರು ಮಾತ್ರವಲ್ಲ ರಾಜ್ಯದ ಎಲ್ಲ ಕಡೆ ನಡೆದಿದೆಯೋ ಎನ್ನುವುದನ್ನೂ ತಿಳಿಯಬೇಕು. ಇದೊಂದು ಕತರ್ನಾಕ್ ಗ್ಯಾಂಗ್ ಚಾಲ್ಸ್ ಶೋಭರಾಜ್‌ಗಿಂತ ಕತರ್ನಾಕ್ ಗ್ಯಾಂಗ್ ಆಗಿದೆ ಎಂದರು.