ಸಾರಿಗೆ ಮುಷ್ಕರ: ಮತ್ತೊಬ್ಬ ಬಸ್​ ಚಾಲಕ ಬಲಿ

bus driver death
Published on

ಬೀದರ್​: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರದ ಪ್ರಯುಕ್ತ ಶುಕ್ರವಾರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬೆಳಗಾವಿ ಜಿಲ್ಲೆ ಬಸ್​ ಚಾಲಕರೊಬ್ಬರು ತಡರಾತ್ರಿ ಹೃದಯಾಘಾತದಿಂದ ಮೃತಪಟ್ಟ ಬೆನ್ನಲ್ಲೇ ಶನಿವಾರ ಬೀದರ್​ ಜಿಲ್ಲೆಯಲ್ಲಿ ಮತ್ತೊಬ್ಬ ಬಸ್​ ಚಾಲಕ ಎದೆನೋವಿನಿಂದ ಕೊನೆಯುಸಿರೆಳೆದಿದ್ದಾರೆ.

ಔರಾದ್​ ಡಿಪೋ ಚಾಲಕ ಮಕಬೂಲ್​ ಹೃದಯಘಾತದಿಂದ ಮೃತಪಟ್ಟಿದ್ದಾರೆ. ಎಲ್ಲೆಡೆ ಸಾರಿಗೆ ನೌಕರರ ಮುಷ್ಕರ ನಡೆಯುತ್ತಿದೆ. ಕೆಲಸಕ್ಕೆ ಹಾಜರಾಗಬೇಕು ಎಂಬ ಅಧಿಕಾರಿಗಳ ಒತ್ತಡ ಒಂದೆಡೆಯಾದರೆ, ಕೆಲಸಕ್ಕೆ ಯಾವುದೇ ಕಾರಣಕ್ಕೂ ಹೋಗುವದು ಬೇಡ ಎಂಬ ಮುಷ್ಕರ ನಿರತ ನೌಕರರ ಒತ್ತಡ ಇನ್ನೊಂದೆಡೆ. ಇದರ ಮಧ್ಯೆ ಮಕಬೂಲ್​ ಬೆಳಗ್ಗೆ ಮಹಾರಾಷ್ಟ್ರದ ನಾಂದೇಡಗೆ ಕೆಲಸಕ್ಕೆ ತೆರಳಿದ್ದರು. ಒತ್ತಡದ ನಡುವೆ ಬಸ್​ ಚಾಲನೆ ಮಾಡುತ್ತಿದ್ದ ಮಕಬೂಲ್​ಗೆ ದೇಗಲೂರ ಸಮೀಪ ಎದೆನೋವು ಶುರುವಾಗಿದೆ. ತಕ್ಷಣ ಬಸ್​ ಅನ್ನು ರಸ್ತೆಪಕ್ಕ ನಿಲ್ಲಿಸಿದ್ದಾರೆ. ಬಸ್​ನಲ್ಲಿ ಹೃದಯಾಘಾತವಾಗಿ ಚಾಲಕ ಕೊನೆಯುಸಿರೆಳೆದರು.

ಕೆಲಸಕ್ಕೆ ಹಾಜರಾಗಲು ಅಧಿಕಾರಿಗಳ ಒತ್ತಡ, ಬೇಡ ಎಂದು ಯೂನಿಯನ್​ ಒತ್ತಡ. ಇದರಿಂದ ಬಳಲಿದ್ದ ಚಾಲಕನಿಗೆ ಹೃದಯಘಾತವಾಗಿದೆ ಎಂದು ಹೇಳಲಾಗುತ್ತಿದೆ. ಮೃತದೇಹ ತರಲು ಅಧಿಕಾರಿಗಳು ದೇಗಲೂರನತ್ತ ಪ್ರಯಾಣ ಬೆಳೆಸಿದ್ದಾರೆ. ಮಕಬೂಲ್​ ಔರಾದ್​ ತಾಲೂಕಿನ ಸಂತಪುರ್​ ನಿವಾಸಿ.

ಬೆಳಗಾವಿಯ ಎರಡನೇ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸ್ ಚಾಲಕ ದತ್ತಾ ಮಂಡೋಳ್ಕರ್(58) ಶುಕ್ರವಾರ ತಡರಾತ್ರಿ ಮೃತಪಟ್ಟಿದ್ದರು. ಶುಕ್ರವಾರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವೇಳೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇವರು ಮನೆಗೆ ತೆರಳಿದ್ದರು. ಆದರೆ ತಡರಾತ್ರಿ ಕೊನೆಯುಸಿರೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net