ಭೂಸ್ವಾಧೀನ ವಿರುದ್ಧ ಮತ್ತೊಂದು ಹೋರಾಟ

Oplus_0
Published on

 ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ/ನಂದಗುಡಿ

ಜಿಲ್ಲೆಯ ನೆಲಮಂಗಲ ಹಾಗೂ ದೇವನಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಸರ್ಕಾರದ ಭೂಸ್ವಾಧೀನ ಪ್ರಕ್ರಿಯೆಗೆ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೆ ಹೊಸಕೋಟೆ ಭಾಗದಲ್ಲೂ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಸರ್ಕಾರದ ವಿರುದ್ಧ ಸಮರ ಸಾರಿದೆ.

ನೆಲಮಂಗಲ ತಾಲೂಕು ವ್ಯಾಪ್ತಿಯ ದಾಬಸ್‌ಪೇಟೆ ವ್ಯಾಪ್ತಿಯಲ್ಲಿ ಹಲವು ರೈತರ ವಿರೋಧದ ನಡುವೆಯೂ ಈಗಾಗಲೇ ಸಾವಿರಾರು ಎಕರೆ ಭೂಸ್ವಾಧೀನವಾಗಿದೆ, ಅದೇ ರೀತಿ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ವ್ಯಾಪ್ತಿಯಲ್ಲಿ ಅನಿರ್ದಿಷ್ಟಾವಧಿ ಧರಣಿ ನಡುವೆಯೂ ಪ್ರಕ್ರಿಯೆ ಜಾರಿಯಲ್ಲಿದೆ, ಏತನ್ಮಧ್ಯೆ ಹೊಸಕೋಟೆ ತಾಲೂಕು ನಂದಗುಡಿ ವ್ಯಾಪ್ತಿಯಲ್ಲಿ ಭೂಸ್ವಾಧೀನಕ್ಕೆ ಸರ್ಕಾರ ಮುಂದಾಗಿರುವುದು ಜಿಲ್ಲೆಯಲ್ಲಿ ರೈತರ ಹೋರಾಟದ ಕಾವು ಹೆಚ್ಚಿಸಿದೆ.

ಕೈಗಾರಿಕಾ ಪ್ರದೇಶದ ಅಭಿವೃದ್ಧಿ ಹೆಸರಿನಲ್ಲಿ ನೆಲಮಂಗಲ ಹಾಗೂ ದೇವನಹಳ್ಳಿ ವ್ಯಾಪ್ತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದರೆ ಹೊಸಕೋಟೆ ತಾಲೂಕಿನ ನಂದಗುಡಿ ಹಾಗೂ ಸೂಲಿಬೆಲೆ ವ್ಯಾಪ್ತಿಯಲ್ಲಿ ಸಮಗ್ರ ಟೌನ್‌ಶ್ಿ ನಿರ್ಮಾಣಕ್ಕೆ ಸಾವಿರಾರು ಎಕರೆ ವಶಕ್ಕೆ ಪಡೆಯುವ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ. ಇದು ಹೊಸಕೋಟೆ ತಾಲೂಕು ವ್ಯಾಪ್ತಿಯಲ್ಲಿ ಭೂ ಕಳೆದುಕೊಳ್ಳುವ ಆತಂಕ ಎದುರಿಸುತ್ತಿರುವ ರೈತರು ಒಗ್ಗೂಡಿ ಈ ಯೋಜನೆ ವಿರುದ್ಧ ಸಮರ ಸಾರಲು ಸಿದ್ದರಾಗುತ್ತಿದ್ದಾರೆ.

ನ.5ಕ್ಕೆ ಬೃಹತ್ ಪ್ರತಿಭಟನೆ: ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ಸಮಗ್ರ ಟೌನ್‌ಶಿಪ್‌ಗಾಗಿ ನಂದಗುಡಿ ಹಾಗೂ ಸೂಲಿಬೆಲೆ ಹೋಬಳಿಯ 36 ಗ್ರಾಮಗಳ 18,500 ಸಾವಿರ ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲು ಸಿದ್ಧತೆಗೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ರೈತರು ಆಕ್ರೋಶ ವ್ಯಕ್ತಪಡಿಸಿ, ನಂದಗುಡಿಯಲ್ಲಿ ನ.5ಕ್ಕೆ ಬೃಹತ್ ಪ್ರತಿಭಟನೆಗೆ ಮುಂದಾಗಿದ್ದಾರೆ.

ಸರ್ಕಾರದ ಕ್ರಮಕ್ಕೆ ಆಕ್ರೋಶ:  ರಾಜ್ಯ ಸರ್ಕಾರ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಮೂಲಕ ನಂದಗುಡಿ ಟೌನ್‌ಶಿಪ್ ನಿರ್ಮಾಣ ಕಾರ್ಯಕ್ಕೆ ಮುಂದಾಗಿದೆ. ರೈತರ ಕಣ್ತಪ್ಪಿಸಿ ತರಾತುರಿಯಲ್ಲಿ ನೋಟಿಫಿಕೇಷನ್ ಹೊರಡಿಸುವ ಹುನ್ನಾರ ನಡೆಸಿದೆ ಎಂದು ನಂದಗುಡಿಯ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ರೈತ ಮುಖಂಡರ ಪೂರ್ವ ಸಿದ್ಧತಾ ಸಭೆಯಲ್ಲಿ ಸಮಿತಿ ಅಧ್ಯಕ್ಷ ಕೆಂಚೇಗೌಡ ಆಕ್ರೋಶ ಹೊರಹಾಕಿದ್ದಾರೆ. ನಂದಗುಡಿಯಲ್ಲಿ ಟೌನ್‌ಶಿಪ್ (ಉಪನಗರ) ನಿರ್ಮಿಸಲು ಗುರುತಿಸಿರುವ ಭೂ ಪ್ರದೇಶದ ಪ್ರಿಲಿಮಿನರಿ ನೋಟಿಫಿಕೇಷನ್ (ಪ್ರಾಥಮಿಕ ಅಧಿಸೂಚನೆ) ಹೊರಡಿಸುವುದಕ್ಕೂ ಮುನ್ನ ರೈತರ ಅಭಿಪ್ರಾಯ ಸಂಗ್ರಹಿಸಬೇಕು. ಇಲ್ಲಿ ಟೌನ್‌ಶಿಪ್ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಹಾಗೊಂದು ವೇಳೆ ಟೌನ್‌ಶಿಪ್ ಮಾಡಲು ಮುಂದಾದರೆ ಪ್ರಾಣ ಬಿಡಲು ಹೆದರುವುದಿಲ್ಲ. ಪಕ್ಷಾತೀತವಾಗಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ರವಾನಿಸಿದ್ದಾರೆ.

ಕೃಷಿಭೂಮಿ ಕಣ್ಮರೆ: ಅಭಿವೃದ್ಧಿಯ ಹೆಸರಿನಲ್ಲಿ ಸರ್ಕಾರ ಕೃಷಿಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ, ಇದು ಭವಿಷ್ಯದಲ್ಲಿ ಆಹಾರಕ್ಷಾಮಕ್ಕೆ ಮುನ್ನುಡಿಯಾಗಲಿದೆ ಎಂಬುದು ರೈತರ ಆತಂಕವಾಗಿದೆ, ಅಭಿವೃದ್ಧಿ ಹೆಸರಿನಲ್ಲಿ ಕೃಷಿಭೂಮಿಯನ್ನು ಬರಡಾಗಿಸುತ್ತಾ ಸಾಗಿದರೆ ಮುಂದಿನ ಪೀಳಿಗೆಯ ಭವಿಷ್ಯವೇನು ಎಂದು ರೈತ ಮುಖಂಡರು ಸರ್ಕಾರದ ವಿರುದ್ಧ ಗುಡುಗುತ್ತಿದ್ದಾರೆ.

ನ.5ರಂದು ನಂದಗುಡಿಯಲ್ಲಿ ಸಾವಿರಾರು ರೈತರ ಬೃಹತ್ ಪ್ರತಿಭಟನೆ ನಡೆಸಲಿದ್ದು, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ವಿ. ಗೋಪಾಲಗೌಡ, ಅಳಂದ ಶಾಸಕ ಬಿ.ಆರ್. ಪಾಟೀಲ್, ಶಾಶ್ವತ ನೀರಾವರಿ ಸಮಿತಿ ಅಧ್ಯಕ್ಷ ಅಂಜನೇಯರೆಡ್ಡಿ ಸೇರಿ ಹಲವು ರೈತಪರ ಕನ್ನಡಪರ ಸಂಘಟನೆಗಳು ಪಾಲ್ಗೊಳ್ಳಲಿವೆ, ಕೃಷಿ ಭೂಮಿಯನ್ನು ರೈತರಿಂದ ಕಿತ್ತುಕೊಳ್ಳಲು ಮುಂದಾಗಿರುವ ಸರ್ಕಾರ ವಿರುದ್ಧ ಅನ್ನದಾತರು ಸಮರ ಸಾರಿದ್ದಾರೆ.

ಐ.ಸಿ. ಮುನಿಶಾಮಗೌಡ, ಹಿರಿಯ ರೈತ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net